ಲೇಬಲ್‌ಗಳು

ಗುರುವಾರ, ನವೆಂಬರ್ 20, 2014

ಮಾಯೆಯ ಪಿತೂರಿ

ಮೋಡಕ್ಕೆ ತಿಳಿದಿರಲಿಲ್ಲಾ
ಮಳೆಯೆಂಬ ಮಾಯೆಯು
ಅಡಗಿಹುದು ಅದರೊಳಗೆಂದು.

ಮಳೆಗೂ ತಿಳಿದಿರಲಿಲ್ಲ
ಮಾಯೆಯೊಂದಿಹುದು ಅದರೊಳಗೆಂದು.

ಬೆಂಕಿಪೊಟ್ಟನದ ಕಡ್ಡಿಗೆ
ತಿಳಿದಿರಲಿಲ್ಲಾ
ತನ್ನ ತಲೆಯ ಮೇಲಿನ ಟೊಪ್ಪಿ ಆತ್ಮಾಹುತಿಯ ತಯಾರಿಯಂದು.

ಬೆಂಕಿಪೊಟ್ಟಣಕ್ಕೊ ತಿಳಿದಿರಲಿಲ್ಲಾ
ತನ್ನ ಬಟ್ಟೆ
ಕೊಲೆಯ ಪಿತೂರಿಗೆ ಎಂದು!
-------------------------
೧೮/೧೧/೧೪ ರಂದು ಬರೆದ್ದಿದ್ದು!

ಟ್ವಿಟ್ಟರ್ ನಲ್ಲಿ ನಾನು ಇರಲು ಕಾರಣ ಈ ನನ್ನ ಹುಚ್ಚು ಹನಿಗವನಗಳು. ಅಲ್ಲಿ ಹಲವರ ಮೆಚ್ಚುಗೆ/ಟೀಕೆಗಳು ನನ್ನನ್ನು ಮತ್ತೂ ಬರೆಯುವಂತೆ ಪ್ರೋತ್ಸಾಹಿಸುತ್ತದೆ... ಜೀವನದ ಸಾರ್ಥಕತೆಗೆ ಒಂದು ಅಡಿಪಾಯ ಇದಾಗಿರಬಹುದೇನೊ!

ಮಂಗಳವಾರ, ನವೆಂಬರ್ 11, 2014

ಹೀಗೆ ಒಂದು ನೆನಪು...

ಬಹಳ ದಿನಗಳಾಯಿತು ನಾನು ಈ ಬ್ಲಾಗ್ ಗಿಗಾಗಿ ಏನನ್ನಾದ್ರು ಬರೆದು.... 
ಏನನ್ನೋ ಯಾಕೆ ಮೊನ್ನೆ ಮೊನ್ನೆ ಬಿಡಿಸಿದ ಒಂದು ಚಿತ್ರದ ಬಗ್ಗೆನೇ ಬರಿಯೋಣ ಅಂತ ಯೋಚಿಸಿ ಬರಿತಿದ್ದೇನೆ ಈ " ಹೀಗೆ ಒಂದು ನೆನಪು."
ಒಂದು ಮೊದಲ ಚಿಕ್ಕ ಪ್ರಯತ್ನ 

ನವೆಂಬರ್ ೦೯ ೨೦೧೪ ಒಬ್ಬ ಮಹಾನ್ ಚೇತನ ಹಾಗು ಚಿರ ಸ್ಮರಣೀಯ ವ್ಯಕ್ತಿಯ ೬೦ನೇ ಜನ್ಮ ದಿನದ ನೆನಪನು ತರಿಸ್ತು. 
ಆತ ನಮ್ಮೊಟ್ಟಿಗೆ ಇದ್ದಿದ್ದು ಕೇವಲ ೩೬ ವರುಷ! ನಮ್ಮೊಟ್ಟಿಗೆ ಅಂದ್ರೆ ತಪ್ತಿಳಿಬೇಡಿ ಅವರು ಜೀವಂತ ಇದ್ದಾಗ ನಾ ಇನ್ನೂ ಹುಟ್ಟೇ ಇರ್ಲಿಲ್ಲ. ಲೆಕ್ಕ ಪಕ್ಕ ಇದ್ದರೆ ಈ ಹೊತ್ತಿಗೆ ಅವರ ಜೀವಮಾನ ೧೯೫೪-೧೯೯೦ ಅಂತ ಎಣಿಸಿರ್ತಿರ!

Wikipedia  ತಿಳಿಸೋ ಪ್ರಕಾರ ತನ್ನ ಜೀವಮಾನದ ೩೬ ವರ್ಷಗಳಲ್ಲಿ ಈ ವ್ಯಕ್ತಿ ಕೇವಲ ೧೨ ವರ್ಷ (೧೯೯೭೮-೧೯೯೦) ಸಿನಿಮಾ ರಂಗದಲ್ಲಿ ಇದ್ದದ್ದು. ಅಂದ್ರೆ ೨೪-೨೫ನೇ ವಯಸ್ಸಿಗೆ ಗಾಂಧೀನಗರದ ಬಹುಬೇಡಿಕೆಯ ನಟ, ನಿರ್ದೇಶಕ, ನಿರ್ಮಾಪಕ, ಸ್ಕ್ರೀನ್ ಪ್ಲೇ ರೈಟರ್ ಕೂಡ ಆಗಿ ಮನೆ ಮಾತಾಗಿದ್ರು ಅಂತ ಅರ್ಥ! 
ಅಂದ ಹಾಗೆ ೧೨ ವರ್ಷಗಳಲ್ಲಿ ಇಷ್ಟೆಲ್ಲಾ ಪ್ರತಿಭೆ ಇರೋ ಹಾಗು ಇಷ್ಟೆಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರೋ ವ್ಯಕ್ತಿ ಅಬ್ಬಬ್ಬಾ ಅಂದ್ರೆ ಎಷ್ಟು ಸಿನಿಮಾ ಮಾಡಿರಬಹುದು? ೧೨? ೨೪? ೩೬? ಹೋಗ್ಲಿ ೪೮?? ನಂಬಲಿಕ್ಕೆ ಅಸಾಧ್ಯ ಅನಿಸಿದರು ನಿಜ! ಬರೋಬ್ಬರಿ ೮೦ ಚಿತ್ರಗಳಲ್ಲಿ ನಾಯಕ ನಟನಾಗಿ ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತ ಆಗಿಬಿಟ್ರು!! ಬರಿಯ ಸಿನಿಮಾ ಕ್ಷೇತ್ರ ಆಗಿದ್ರೆ ಸುಮ್ನಿರಬಹುದಿತ್ತೇನೋ ಆದ್ರೆ ಮೆಟ್ರೊ ರೈಲ್ ಅಂತೆ, ಸಂಗೀತ ಅಂತೆ, ನಾಟಕವಂತೆ, ಹೊಸ ತಂತ್ರಜ್ಞಾನವಂತೆ, ಲೋಕಾಭಿವೃದ್ಧಿ ಯೋಚನೆಗಳಂತೆ!! ಭಯಂಕರ!!

ಸಿನಿಮಾ ಹಾಡುಗಳು, ಕಥೆಗಳು ಒಂದು ಕಡೆಗೆ ಆದರೆ, "ಮಾಲ್ಗುಡಿ ಡೇಸ್ ನ (MalguDi Days)"  ತಾನಾ ನ ತಾನ ನನ ನಾ  ಬರಿಯ ಗುನುಗುವ ಹಾಡು ಹೊಸ ಅಲೆ ಎಬ್ಬಿಸಿಬಿಟ್ಟಿತ್ತು. ಅವರು ಅಗಲಿ ವರುಷಗಳಾದ್ರು ನನ್ನಂತಹ ಯುವ ಜನಾಂಗಕ್ಕೆ ಸ್ಫೂರ್ತಿ ಆಗಿ ಆಕಾಶದೆತ್ತರಕ್ಕೆ ನಿಲ್ಲುತ್ತಾರೆ ಈ ವ್ಯಕ್ತಿ!

ನಾ ಮಾತಾಡ್ತಿರೋದು ಯಾರ್ ಬಗ್ಗೆ ಅಂತ ತಿಳಿದಿರ್ಬೇಕು ಅಲ್ವ?  ಆಟೋ ರಾಜ ಅನ್ನಿ, ಕರಾಟೆ ಕಿಂಗ್ ಅನ್ನಿ, ಶಂಕರಣ್ಣ ಅನ್ನಿ, ಶಂಕರ್ ನಾಗ್ ಅನ್ನಿ, ಈ ಪ್ರಜ್ಞಾ ಡ್ರೀಮರ್ ಗೆ ಮಾತ್ರ ಇವರು ಒಬ್ಬ ಯಶಸ್ವಿ ಕನಸುಗಾರ ಹಾಗು ಇನ್ಸ್ಪಿರೇಷನ್ ಗಳಲ್ಲಿ ಒಬ್ಬರು. 

ಅವರಿಗೆ ನನ್ನ ಚಿತ್ರ ನಮನ. 
ಮೊದಲನೇ ಆಯಿಲ್ ಪೇಂಟಿಂಗ್ ಭಾವಚಿತ್ರ. ರೇಖೆಗಳು ಅವರಿಗೆ ಹೋಲಿಕೆ ಆಗುವಷ್ಟು ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದಲ್ಲಿ ಮರು ಪ್ರಯತ್ನ ಅಂತ ಒಂದು ಖಂಡಿತವಾಗಿಯೂ ಇದೆ ಅಂತ ನನ್ನ ಅಭಿಪ್ರಾಯ! :)