ಲೇಬಲ್‌ಗಳು

ಶುಕ್ರವಾರ, ಜನವರಿ 12, 2018

ಪ್ಲಾಟ್ಫಾರಂ ಟಿಕೆಟ್

ಥೆ ಅಂದ್ರೆ ಕಟ್ಟು ಕಥೆ ಅಲ್ಲ. ಹಾಗಂತ ತೀರಾ ಹೊಸತು ಏನಲ್ಲ. ಹೀಗೆ ಎಲ್ಲ ಗೊತ್ತು ಆದರು ಸ್ವಲ್ಪ ಪೆದ್ದು ಅಂತಾರಲ್ಲ ಆ category ಕಥೆ ಇದು. ನನ್ನ ಸ್ವಂತ ಅನುಭವದ ಒಂದು ಕಥನ. ಸೋಶಿಯಲ್ ಮೀಡಿಯಾದಲ್ಲಿ ೭-೮ ವರ್ಷದಿಂದ ಇದ್ರೂ ಸೋಶಿಯಲ್ ಮೀಟಪ್ಸ್ ಗೆ ಹೋಗಿರೋದು ವಿರಳ ಅನ್ನೋದಕ್ಕಿಂತ ಇಲ್ಲವೇ ಇಲ್ಲ ಅನ್ನೋದು ಸತ್ಯಕ್ಕೆ ಸಮೀಪ.  ಹಾಗಂತ ನಾನು ಅಂತರ್ಮುಖಿ, ಮಾತು ಕಮ್ಮಿ ಅನ್ನೋ ಲೆಕ್ಕಾಚಾರ ಮಾಡಿದ್ರೆ ನಿಮ್ಮ ಲೆಕ್ಕ ತಪ್ಪು.  ಟ್ವಿಟ್ಟರ್-ಇನ್ಸ್ಟಾಗ್ರಾಮ್ ಆದ ಬಳಿಕ ನನಗೆ ಸಮೀಪ ಅನಿಸಿದ ಕೆಲವು ಸ್ನೇಹಿತರನ್ನ ಭೇಟಿಮಾಡಬೇಕು ಅಂತ ತೀರ್ಮಾನಿಸಿದ್ದೆ. ಯಾವುದಕ್ಕೂ ಇರ್ಲಿ ಅಂತಾ ಸ್ವಲ್ಪ ಜಾಸ್ತಿನೇ ಪರಿಚಯ ಇದ್ದ ಗೆಳತಿಗೆ ಬಾ ಅಂತ ತಾಖೀತ್ ಮಾಡಿದ್ದೆ. ಅವಳು ಉಹ್ಞೂ ಅನ್ನೂವುದಕ್ಕೆ ಆಗದೆ ಒಪ್ಪಿದ್ದಳು. ಆಕೆಯದು ಮೈಸೂರು ಸ್ವಂತ ಸ್ಥಳ. ಹೇಳಿದ್ರೆ ಎಲ್ಲಿ ನಾನು ಬೇಜಾರ್ ಮಾಡ್ಕೋತೀನೋ ಅಂತ ಅವತ್ತಿನ ದಿನ (ಭೇಟಿ ಮಾಡುತಿದ್ದ ದಿನ) ಊರಿಗೆ ಹೋಗೋ ವಿಷಯ ಹೇಳಿರಲಿಲ್ಲ.
ಸರಿ, ಮಿಕ್ಕ ಎಲ್ಲ- ಹೊಸ ಭೇಟಿ ಹಳೆಯ ಪರಿಚಯ- ಸ್ನೇಹಿತರಿಗೆ " ... pottery  town ಗೆ ಸುಮಾರು ಹತ್ತು ಗಂಟೆಗೆ ಬಂದ್ಬಿಡಿ, ಅದೃಷ್ಟ ಇದ್ರೆ ಮಡಿಕೆ ಮಾಡುವ." ಅಂತ ಹೇಳಿ ತಿಳಿಸಿಬಿಟ್ಟೆ. ನಾವು ಹೊರಟಿದ್ದ ದಿನ ಬೇರೆ ಬೆಂಗಳೂರಲ್ಲಿ ಒಂದೇ-ಸಮ ಮಳೆ ಬರುತಿದ್ದ ಕಾಲ. Cyclone ಎಫೆಕ್ಟ್ ಇಂದ ಮೋಡ ಕವಿದ ವಾತಾವರಣ. ಅಲ್ಲಲ್ಲಿ ಅನಿರ್ದಿಷ್ಟಾವಧಿ ಮಳೆಯ ಆರ್ಭಟ. ತತ್ತರಿಸಿ ಹೋದ ಬೆಂಗಳೂರು ಕುಗ್ರಾಮ (ಈ ಮಳೆ ಬೆಳೆ ವಿಷ್ಯ ಬಂದಾಗ ಬೆಂಗಳೂರು ನನಗೆ ಪುಟ್ಟ ಸುವ್ಯವಸ್ಥೆ ಇಲ್ಲದ ಹಳ್ಳಿಯ ಹಾಗೆ ಕಾಣೋದು, ನಿಮ್ಮ ಭಾವನೆಗಳಿಗೆ ನೋವಾಗಿದ್ರೆ ಕ್ಷಮಿಸಿ).
ಒಬ್ಬಳು ಊರಿಗೆ ಹೋಗ್ಬೇಕಿತ್ತು, ಇನ್ನೊಬ್ಬಳು sick leave ಹಾಕಿ ಬಂದಿದ್ದಳು, ಇನ್ನೂ ಮೂವರಿಗೆ ಬಕ್ರೀದ್ ರಜೆ ಇತ್ತು. ನಾವು ೫ ಜನ ಭೇಟಿ ಮಾಡಿ, ಮುಂಚೆನೇ ಅಂದ್ಕೊಂಡಿದ್ದಹಾಗೆ ಮಣ್ಣಿನ ಮಡಿಕೆ ಕೂಡ ಮಾಡಿ, ಸಿಕ್ಕ ಸ್ವಲ್ಪ ಸಮಯದಲ್ಲೇ ಕುಶಲೋಪರಿ ವಿಚಾರಿಸಿ ನಮ್-ನಮ್ಮ ದಾರಿ ಹಿಡಿದ್ವಿ. ಆಗ ಈ ಹಳೆ ಪರಿಚಯದ ಮೇಘ ಮೈಸೂರು ಸುದ್ದಿ ತೆಗಿದ್ಲು, ಇನ್ನು ಒಂದು ಗಂಟೇಲಿ ಟ್ರೈನ್ ಇದೆ ಅಂತ ೧:೪೦ಕ್ಕೆ ಹೇಳಿದ್ಲು, ಹೊಸ ಪರಿಚಯದ ಮಹಿಮ ಮತ್ತು ನಾನು ಮೇಘಳನ್ನ ಹೇಗಾದ್ರು ಮಾಡಿ ರೈಲು ಹತ್ತಿಸುವ ಪಣ ತೊಟ್ಟಿದ್ವು.
ಮಧ್ಯಾಹ್ನ,  ಅದರಲ್ಲೂ ಬಕ್ರೀದ್ ದಿನ ಯಾವ ಆಟೋ ಕೇಳಿದ್ರು ಇಲ್ಲ, ಯಾವ ಬಸ್ಸು ಸ್ಟಾಪ್ ಗೆ  ಓಡಿದ್ರು ಇಲ್ಲ.  ola, uber ಯಾವುದು ಇಲ್ಲ.  ಸ್ವಲ್ಪ ಪರದಾಡಿದ ಮೇಲೆ ಒಂದು ಆಟೋ ಸಿಕ್ತು. ಹತ್ತಿರದ ಮೆಟ್ರೋ ಸ್ಟೇಷನ್ ಏರಿ ಒಳ ನುಗ್ಗಿ, ತಪಾಸಣೆ ಕ್ಯೂ ಅಲ್ಲಿ ನಿಂತು ನಮ್ಮ ಬಳಿ ಇದ್ದ smart card ಫ್ಲಾಶ್ ಮಾಡಿ ಈ ಕಡೆ ಬಂದು ನೋಡಿದ್ರೆ.... ಮೇಘ ಇನ್ನೂ ಟೋಕನ್ ಕ್ಯೂ ನಲ್ಲಿ ನಿಂತಿದ್ದಳು. ಅಂತೂ ಇಂತೂ ಮೆಟ್ರೋ ಪ್ರಯಾಣ ಮುಗ್ಸಿ ಮೆಜೆಸ್ಟಿಕ್ ಇಳಿದ್ರೆ ಮಳೆ ಶುರುವಾಗಿ ಬಿಡೋದೇ? ಸರಿ ಹೋಯಿತು! ಇನ್ನು ಟ್ರೈನ್ ಹತ್ತಿದಹಂಗೆ ಅಂದುಕೊಂಡ್ರೂ ಛಲ ಬಿಡದ ಯೋಧರ ಹಾಗೆ ಮಳೇಲಿ ಓಡಿದ್ವಿ -ರೈಲ್ವೆ ಸ್ಟೇಷನ್ ಗೆ.
ಅಲ್ಲಿ ಹನುಮಂತನ ಬಾಲದಂತೆ ಕ್ಯೂ. ಒಂದೇ ಟಿಕೆಟ್ ಕೌಂಟರ್, ಉಳಿದಿದ್ದವೆಲ್ಲ lunch break ನಲ್ಲಿ ಇದ್ದವು. ಹೇಳಿದ್ನಲ್ಲ ಮಧ್ಯಾಹ್ನ ಅಂದ್ರೆ ನಮ್ಮ ಊರಲ್ಲಿ ಕೆಲಸ ಆದಂಗೇನೇ. ಈ ಮಧ್ಯ ಯಾವುದೋ ಒಬ್ಬ ಹೆಂಗಸು ಕ್ಯೂ ಮಧ್ಯ ನುಗ್ಗಿದಕ್ಕೆ ಜೋರ್ ಗಲಾಟೆ ಬೇರೆ!  ಸಮಯ ನೋಡಿದ್ರೆ ೨:೨೦! ಆಗ ಬಂತು ನೋಡಿ ಒಂದು ವಿಚಿತ್ರ ಐಡಿಯಾ! ಮೇಘಾಳಿಗೆ -"ನೀನು ರೈಲು ಹತ್ತಿ ಕೂತು ಬಿಡು, ನಾವು ಹೆಂಗೋ ಟಿಕೆಟ್ ತಂದು ಕೊಡ್ತಿವೀ ." ಅಂದು ಬಿಟ್ಟೆ! ದುಸ್ಸಾಹಸ ಅಂದ್ರೆ ಇದೇನಾ?
ಹೊರಗಡೆ ಟಿಕೆಟ್ ವೆಂಡಿಂಗ್ ಮಷೀನ್ ಅಲ್ಲಿ ಒಬ್ಬಾತ ಟಿಕೆಟ್ ತೆಗೆದು ಕೊಡ್ತಿದ್ದ. ಅಲ್ಲೂ ತುಂಬಾ ಜನ ಇದ್ರೂ , ಗುಂಪಲ್ಲಿ ಗೋವಿಂದಾ ಅಂತ, "ಮೈಸೂರ್ ಗೆ ಒಂದು ಟಿಕೆಟ್ ಕೊಡಿ." ಅಂದೆ, ಆತ ಕೊಟ್ಟಿದೆ ತಡ ಒಳಗೆ ಒಂದೇ ಉಸಿರಿನಲ್ಲಿ ಓಡಿದ್ವಿ. ಓಡ್ತಾ ಓಡ್ತಾ ಮೇಘ ಗೆ ಫೋನ್ ಮಾಡಿ, "ಟಿಕೆಟ್ ಸಿಕ್ತು, ಎಷ್ಟನೇ ಭೂಗಿ, ಯಾವ ಕಡೆಯ ಕಂಪಾರ್ಟ್ಮೆಂಟ್ ?", ಅಂತ ವಿಚಾರಿಸಿದೆ. ಸದ್ಯಕ್ಕೆ ಮೆಟ್ಟಿಲಿಗೆ ಸಮೀಪ ಇದ್ದ ಭೂಗಿಯಲ್ಲೇ ಅವಳು ಸೀಟು ಹಿಡಿದಿದ್ದಳು. ಅವಳಿಗೆ ಟಿಕೆಟ್ ಒಪ್ಪಿಸಿ, ಉಸ್ಸಪ್ಪ ಅಂತ ನಿಟ್ಟುಸಿರು ಬಿಟ್ವಿ!
ಅಷ್ಟ್ರಲ್ಲಿ ಮೇಘ ,"ಇಲ್ಲೇ ಇರ್ರೆ... ನಾನು ಒಂದು ಬಾಟಲ್ ನೀರು, ಬಿಸ್ಕತ್ ತರ್ತೀನಿ," ಅಂತ ಟಿಕೆಟ್ ನಮ್ಮ ಹತ್ರನೇ ಬಿಟ್ಟು ಬ್ಯಾಗ್ ಕಂಪಾರ್ಟ್ಮೆಂಟ್ ಅಲ್ಲಿ ಇಟ್ಟು ಹೋದ್ಲು! ಎಲ್ಲಿ ಸೀಟೂ ಬ್ಯಾಗು ಹೋಗ್ಬಿಡುತ್ತೋ ಅಂತ ಮಹಿಮಾನು ಭೂಗಿ ಏರಿ ಕೂತ್ಲು. ನನಗೆ ಒಳಗೊಳಗೇ ಭಯ - ರೈಲು ಹೊರಟು ಬಿಟ್ರೆ , ಮಹಿಮಾನು ಮೈಸೂರಿಗೆ ಪಾರ್ಸೆಲ್ ಆಗ್ಬಿಟ್ರೆ ಅಂತ. ಪುಣ್ಯಕ್ಕೆ ಹಾಗೆ ಆಗಲಿಲ್ಲ ಅನ್ನಿ. ಮೇಘ ಬೇಗಾನೆ ವಾಪಸ್ಸು ಬಂದ್ಲು. ರೈಲು ೨:೪೦ಕ್ಕೆ ಹೊರಟಿತು. ಸಾಹಸ ಮುಗಿತು ಅಂತ ಖುಷಿಯಲ್ಲಿ "ಹ್ಯಾಪಿ ಜರ್ನಿ! ತಲುಪಿದ ಮೇಲೆ ಫೋನ್ ಮಾಡು." ಅಂದೆ.

ಅಸಲಿ ಕಥೆ ಈಗ ಶುರು

ನಾನು ಮತ್ತು ಮಹಿಮ ಮನೆಗೆ ಹೋಗುವ ತರಾತುರಿ ಏನು ಇರಲಿಲ್ಲ. ಮೆಜೆಸ್ಟಿಕ್ ಇಂದ ಹೊರ ಬಂದ್ಮೇಲೆ ಎಲ್ಲಿಗಾದ್ರೂ ಹೋಗಿ ಒಳ್ಳೆ ಫಿಲ್ಟರ್ ಕಾಫಿ ಕುಡಿಯೋಣ ಅಂದ್ಕೊಂಡ್ವಿ. ಹಾಗೆ ಎಡಕ್ಕೆ ತಿರುಗಿ exit ಕಡೆ ಬರುತ್ತಿದ್ವಿ.. " ಮೇಡಂ! ಬನ್ನಿ ಇಲ್ಲಿ! " ಅಂತ ಯಾರೋ ಕರಿದ್ರು. ಖಾಕಿ ಸೀರೆ, ಕೈಯಲ್ಲಿ ಒಂದು ಪುಸ್ತಕ. ಏನೋ ಕೇಳ್ತಿದ್ದಾರಲ್ಲ ನೋಡೋಣ ಅಂತ ಹೋದ್ವಿ. "ಪ್ಲಾಟ್ಫಾರಂ ಟಿಕೆಟ್ಸ್ ತೋರ್ಸಿ." ಅಂದ್ರು! "ಇಲ್ಲ, ಫ್ರೆಂಡ್ ನ ರೈಲು ಹತ್ತಿಸಿ ಬರ್ತಿದ್ದೀವಿ ಅಷ್ಟೇ." ಅಂದ್ವಿ, ಪೆದ್ದುಗಳ ಹಾಗೆ. "ಹಾಂ ಹಾಂ, ಪ್ಲಾಟ್ಫಾರಂ ಟಿಕೆಟ್ ಇಲ್ಲ, ಅಲ್ವ? ಸರಿ, ID ಇದೆಯಾ ಯಾವ್ದಾದ್ರು?" ಅಂದ್ರು. ಏನೋ ID ನೋಡಿ ಕಳುಹಿಸ್ತಾರೆ ಅಂದುಕೊಂಡು ಮಹಿಮ ಆಧಾರ್ ಕಾರ್ಡ್ ತೆಗಿದ್ಲು... ತಕ್ಷಣ ಅದನ್ನ ಇಸ್ಕೊಂಡು,"ಇನ್ನು ಯಾವ ಯಾವ ID ಇದೆಯಮ್ಮಾ? ತೋರ್ಸಿ?" ಅಂದ್ರು. ಅವಳ ಕ್ರೆಡಿಟ್ ಕಾರ್ಡ್, ID,  ಫೋನ್ ಎಲ್ಲ ಕ್ಷಣಾರ್ಧದಲ್ಲಿ ಖಾಕಿ ಸೀರೆ ಮೇಡಂ ಕೈಗೆ ಸೇರಿತ್ತು.
ಅಷ್ಟಕ್ಕೇ ನಿಲ್ಲಲಿಲ್ಲ, ನನ್ನ ಕಡೆ ತಿರುಗಿ, "ಹಾಂ, ನಿಮ್ಮ ಹತ್ರ ಏನೇನು ID ಇದಿಯಮ್ಮ? ತೋರ್ಸಿ?", ಅಂದ್ರು. ನಾನು ಅಮಾಯಕಾಳ ಹಾಗೆ voter ID ಕೈಗೆ ಇಟ್ಟೆ. ಆಗ್ಲೇ ಗೊತ್ತಾಗಿದ್ದು ಇದು ಇಸ್ಕೊಂಡಿದ್ದಲ್ಲ...ಕಸಿದುಕೊಂಡಿದ್ದು ಅಂತ. ನಾವಿಬ್ರು ಸ್ವಲ್ಪ ಗಾಬ್ರಿ ಆದ್ವಿ... ಗೋಗೆರಿದ್ವಿ... ಊಹುಂ! ಜಗ್ಗಲಿಲ್ಲ ಖಾಕಿ ಸೀರೆ ಮೇಡಂ.
"ಫೈನ್ ಕಟ್ಟಿ ನಿಮ್-ನಿಮ್ಮ  ವಸ್ತು ವಾಪಸ್ ಇಸ್ಕೊಳ್ಳಿ. ಅಲ್ಲಿಯವರೆಗೂ ಇಲ್ಲೇ ನಿಂತಿರಿ." ಅಂದ್ರು. ಸರಿ, ಫೈನ್ ಕಟ್ಟಿ ಹೋಗೋಣ ಅಂದ್ಕೊಂಡು, "ಫೈನ್ ಎಷ್ಟು ಮೇಡಂ." ಅಂದ್ವಿ.
"ಎಲ್ಲಿಗೆ? ನಿಮ್ಮ ಫ್ರೆಂಡ್ ನ ಬಿಟ್ಟಿದ್ದು?"  ಅಂತ ಕೇಳಿದ್ರು. "ಮೈಸೂರಿಗೆ!" ಅಂದ್ವಿ ಒಕ್ಕೋರಳಲ್ಲಿ. ಒಂದು ಹಳೆಯ ಹಾಳೆ ತೆಗಿದು ನೋಡಿ, "ಇಬ್ಬರಿಗೆ ೧೨೦೦ ರೂಪಾಯಿ ಆಗುತ್ತೆ!" ಅಂತ ಹೇಳಿ ಹೆಸರು ಹಾಕಿ ರಸೀದಿ ಬರಿದುಬಿಟ್ರು!
ನಮಗೆ ಕರೆಂಟು ಹೊಡೆದಂಗೆ ಆಯ್ತು! ಅಷ್ಟು ದುಡ್ಡು ಇಬ್ಬರು ಇಟ್ಟುಕೊಂಡಿರಲಿಲ್ಲ. ನೆಟ್ ಬ್ಯಾಂಕಿಂಗ್, ಈ- ವ್ಯಾಲೆಟ್ಟು ಎಲ್ಲ ಬಂದ್ಮೇಲೆ ನಾನು ಹೆಚ್ಚೆಂದ್ರೆ ರೂ.೫೦೦ ಇಟ್ಟುಕೊಂಡಿರುತ್ತೀನಿ. ಮೆಟ್ರೋ ಕಾರ್ಡ್ ಗೆ ಅವತ್ತಷ್ಟೇ ದುಡ್ಡು ಹಾಕಿಸಿದ್ದೇ. ಹಾಗಾಗಿ ಅದೂ ಇರಲಿಲ್ಲ. ಚಿಲ್ಲರೆ ಎಲ್ಲ ಸೇರಿಸಿದ್ರೆ ೨೦೦ ರೂ ಇತ್ತೇನೋ! ಮಹಿಮನು ಅಷ್ಟೇ ಜಾಸ್ತಿ ದುಡ್ಡು ಇಟ್ಕೊಂಡಿರ್ಲಿಲ್ಲ. ಒಳ್ಳೆ ಪಜೀತಿ ಆಯ್ತಲ್ಲ ಅಂತ ಇಬ್ರಿಗೂ ಮುಜುಗರ ಆಯಿತು.
ಈ pickpocketers ನ ರೋಡ್ ಅಲ್ಲಿ ಹಿಡಿದು ನಿಲ್ಲಿಸಿರುತ್ತಾರಲ್ಲ? ಆ ಥರ ನಮ್ಮನ್ನ ನಿಲ್ಸಿದ್ರು! ನಮ್ಮ ಹಾಗೆ ಪ್ಲಾಟ್ಫಾರಂ ಟಿಕೆಟ್ ಮರೆತೋ ಅಥವಾ ಬೇಕಂತಲೇ ಯಾಮಾರಿಸಲೋ ಅಂತ ಬಂದು ಸಿಕ್ಕಿಹಾಕಿಕೊಂಡವರಿಗೆಲ್ಲ ನಮ್ಮನ್ನ ತೋರ್ಸಿ ತೋರ್ಸಿ ಹೇಳುತ್ತಿದ್ರು,"ದುಡ್ಡಿಲ್ಲ ಅಂದ್ರೆ ಇಲ್ಲಿ ಬಂದು ನಿಂತುಕೊಳ್ಳಿ, ಇವರು ನಿಮ್ಮ ಹಾಗೇನೇ!", ಅಂತ.
"ಹೋಗ್ಲಿ, ಕ್ರೆಡಿಟ್ ಕಾರ್ಡ್ ಕೊಡಿ ದುಡ್ಡು ಡ್ರಾ ಮಾಡ್ಕೊಂಡು ಬರ್ತೀನಿ." ಅಂದ್ಲು ಮಹಿಮ.
ಕಾರ್ಡು ಕೊಟ್ರು. ಮಹಿಮ ನನ್ನ ಅಡಾ ಇಟ್ಟು ಹೋದ್ಲು. ನನಗೆ ಒಂದು ಕಡೆ ಅವಮಾನ ಮಿಶ್ರಿತ ಮುಜುಗರ, ಇನ್ನೊಂದು ಕಡೆ ಮಹಿಮ ಹಾಗೆಯೇ escape ಆಗ್ಬಿಟ್ರೆ ಅನ್ನೋ ಅನುಮಾನ ಮಿಶ್ರಿತ ಭಯ. "ದೇವ್ರೇ ಯಾಕಪ್ಪ ಹೀಗೆ ಮಾಡ್ಬಿಟ್ಟೆ ನನ್ನ? ನಾನು ಕಾಲೇಜು ಅಲ್ಲಿ attendance shortage ಗು ಫೈನ್ ಕಟ್ಟಿದವಳಲ್ಲ! ಈ ಹಾಳಾದ್ದು ಪ್ಲಾಟ್ಫಾರಂ ಟಿಕೆಟ್ ಬಗ್ಗೆ ಯಾಕೆ ನಂಗೆ ಗೊತ್ತಿರ್ಲಿಲ್ಲ? ಅಥವಾ ಗೊತ್ತಿದ್ದು ಗೊತ್ತಿದ್ದು ಯಾಮಾರಿ ಬಿಟ್ನ? ಈಗ ಯಾರಿಗೆ ಫೋನ್ ಮಾಡ್ಲಿ? " ಅಂತೆಲ್ಲಾ ಯೋಚಿಸುತಿದ್ದೇ.
ಇಷ್ಟೆಲ್ಲಾ ತಲೆಯಲ್ಲಿ ಗಿರ್ಕಿ ಹೊಡೀತಿದ್ದಹಾಗೆ ಮಹಿಮ ಬರೋದು ಕಾಣಿಸ್ತು! "ಊಫ್" ಅಂತ ನಿಟ್ಟುಸಿರು ಬಿಟ್ಟೆ.

ನಮ್ಮ ಮುಗ್ದತೆ ನೋಡಿನೋ... ಅಥವಾ ಅಮಾಯಕರು ಅನ್ನೋದು ಕಾಣಿಸಿತೇನೋ...ಗೊತ್ತಿಲ್ಲ!
 "ಇನ್ನು ಚಿಕ್ಕವರಿದ್ದೀರ... ಸ್ಟೂಡೆಂಟ್ಸ್ ಥರ ಕಾಣಿಸುತ್ತೀರಾ, ಇನ್ಮೇಲೆ ಹೀಗೆ ಮಾಡ್ಕೋ ಬೇಡಿ. ಬರಿ ೩೫೦ ರೂ ಫೈನ್ ಹಾಕ್ತೀನಿ." ಅಂದವರೇ ರಸೀದಿ ಹರಿದ್ರು. ಆಮೇಲೆ ಮತ್ತೆ ಕರಿದು,"ನೋಡಿ ಮತ್ತೆ ಏನಾದ್ರು ಒಳಗೆ ಹೋಗಬೇಕಂದ್ರೆ ಈ ರಸೀದಿ ತೋರ್ಸಿ, ಹೋಗಿ!" ಅಂದ್ರು ಖಾಕಿ ಸೀರೆ ಮೇಡಂ.
ಆದ ಅನುಭವಕ್ಕೆ ಒಳಗೆ ಮತ್ತೆ ಹೋಗೋದಿರ್ಲಿ, ಆ ಕಡೆ ತಿರುಗಿ ನೋಡುವುದು ಅನುಮಾನ ಅಂದುಕೊಂಡು, ಹಿಂತಿರುಗದೇ ಜಾಗ ಖಾಲಿ ಮಾಡಿದ್ವಿ ಇಬ್ರು. ಅಲ್ಲಿಗೆ ಸೋಶಿಯಲ್ ಮೀಟಪ್ ನ ಮೊದಲ ಅನುಭವ ಸ್ವಲ್ಪ ಜಾಸ್ತಿಯೇ ನೆನಪುಳಿಯುವ ಹಾಗೆ ಆಯ್ತು.
ಮನೆ ದಾರಿ ಹಿಡಿದು  ಬಾಗಿಲು ತಟ್ಟುತ್ತಿದ್ದೆ, ಆಗ್ಲೇ ಮೇಘಾಳ ಫೋನ್ ಬಂತು," ಮೈಸೂರು ಬಂದೆ ನಾನು." ಅಂದ್ಲು!
"ನಾನು ಈಗಷ್ಟೇ ಮನೆಗೆ ಬಂದೆ!!!", ಅಂದವಳೇ ಜೋರಾಗಿ ನಗಲಿಕ್ಕೆ ಶುರುಮಾಡಿದೆ!

ಅಂದಹಾಗೆ? ಪ್ಲಾಟ್ಫಾರಂ ಟಿಕೆಟ್ ದುಡ್ಡು ಎಷ್ಟು ಗೊತ್ತ? ಹತ್ತು ರೂಪಾಯಿ.  ಶುಭಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ