ಲೇಬಲ್‌ಗಳು

ಶುಕ್ರವಾರ, ಆಗಸ್ಟ್ 31, 2018

ChuTukugaLu

ಕಡಲ ಅಲೆಗಳಲಿ
ನಿಂತ ನೀರಿನಲಿ
ಹಾಯ ದೋಣಿ ನನ್ನ ಕವನ

ಸುಡುವ ಬಿಸಿಲಿರಲಿ
ಕೊರೆವ ಚಳಿಯಿರಲಿ
ಸಾಗುತಿರಲಿ ನಿನ್ನೆಡೆಗೆ
               ನನ್ನ ಪಯಣ!
________________________________
ಗುಡಿಯ ಆರತಿ ನಾದ
ಹೆಬ್ಬಾಗಿಲಿಗೂ ಕೇಳಿಸಿತ್ತು
ನೂಕು ನುಗ್ಗಲಲ್ಲಿ ದಣಿದದ್ದು
ದೇವನ ಕಣ್ತುಂಬಿಕೊಳ್ಳಲು
-ಭಕ್ತ ದೈವದ ಮುಂದೆ ಬಂದವನೇ
ಕಣ್ಮುಚ್ಚಿ ನಿಂತ!

_________________________________
ಅವಳ ಆಸೆಗಳೆಲ್ಲ ತೀರಾ ಸರಳ...

ಭೋರ್ಗರೆವ ಅಲೆಗಳು ಕಾಲ ಅಡಿಗೆರೆಗುವಾಗ
ಕಡಲ ತೀರದಲ್ಲಿ ತುಸು ಹೆಚ್ಚೇ ನಾಚಿದಂತೆ ರವಿಯು ಬೀಳ್ಕೊಡಬೇಕಂತೆ

ಅಲೆಗಳ ಸೆಳೆತ ಹೆಚ್ಚಾದಂತೆ, ಚಂದಿರ ತಾ ,"ಇನ್ನೇನು ಬಂದೇ", ಎನ್ನುತ್ತಿದ್ದಂತೆ
ಅವಳ ಕೈ ಹಿಡಿದು ಎಳೆದು ಅಲೆಗಳೆಡೆಗೆ ಕರೆದೊಯ್ಯಬೇಕಂತೆ ಚಂದಿರನ ಅಂಗಳಕ್ಕೆ.
_________________________________
ಅವಳ ಆಸೆಗಳೆಲ್ಲ ತೀರ ಸರಳ...

ಆಗಸದ ಹಕ್ಕಿಯ ಹಾಗೆ
ಬಾನಾಡಿ ಬಳಗದ ಹಾಗೆ,
ರಾಶಿ ಕನಸಿನ ಕಲರವವ ಹೊತ್ತು,
ಬಣ್ಣ ಬಣ್ಣಗಳ ಚಿತ್ತಾರ ಮೂಡಿಸುವ ಕಾರ್ಯ.

ಮಳೆಬಿಲ್ಲು ಮೂಡಿತೇನೋ ಅನ್ನುವ ಹಾಗೆ,
ಮಳೆಯಲ್ಲಿ ಮಿಂದ ನವಿಲುಗರಿಗಳ ಹಾಗೆ.
ನೂತನ ಭಾವದ ಚಿಲುಮೆಯ ಹೊತ್ತು
ಬಾನಿನಂಗಳಕ್ಕೆ ಜೋಡಿ ಹಕ್ಕಿ ಜಿಗಿಯುವ ಕಾರ್ಯ.
_________________________________
ಎಲ್ಲರ ಬಾಳಲ್ಲೂ plus - minus ಗಳು ಆಗ್ತಾನೆ ಇರುತ್ತೆ. ಪ್ಲಸ್ ಆದಾಗ ಖುಷಿ ಪಟ್ಟು, ಮೈನಸ್ ಆದಾಗ ಜೀವನ ದೊಡ್ಡ ಮೋಸ ಅನ್ನೋದು ತಪ್ಪು.

ಖಾಲೀ ಅನ್ನೋದು ಯಾವ್ದು ಇಲ್ಲ. ಖಾಲೀ ಅನ್ನೋದು ನಮ್ಮ ಮನಸ್ಥಿತಿಯ ಪ್ರತೀಕ. ಪ್ಲಸ್ ಮೈನಸ್ ಗಳ ಮಾಯಾ ಲೋಕ. 
_________________________________
ಅದ್ಯಾಕೆ ಅಂತ ಗೊತ್ತಿಲ್ಲ
ಆಗಾಗ ಏನನ್ನೋ ಕಳೆದುಕೊಂಡ ಅನುಭವ ಆಗುತ್ತೆ.
ತುಂಬ ಬೇಕಾದ ವಸ್ತು ಒಂದನ್ನ
ಎಲ್ಲೋ ಇಟ್ಟು ಮರೆತ ಅನುಭವ...
ಬೇಕಾದವರೊಬ್ಬರ ಅಗಲಿಕೆಯ ಅನುಭವ.
ತಿಳಿದು ತಿಳಿದು ಕಳೆದು ಹೋಗೋ ಅನುಭವ...
ಹತಾಶೆಯ ಅನುಭವ...
ಭಾವುಕತೆಯ ಅಭಾವದ ಅನುಭವ...
ಜೀನವಾದಲ್ಲಿ ಈಜಾಲಾಗದ ಅನುಭವ.
ಕೆಟ್ಟ ಶತ್ರುವಿಗೂ ಬೇಡ!
___________________________________
ಎಲ್ಲ ನಮ್ಮನಮ್ಮ ದೃಷ್ಟಿಯಲ್ಲಿ ಇದೆ‌‌.
ಇಷ್ಟವಾದವರಾದರೆ...
ಮನದ ಕಡಲ ಭೋರ್ಗರೆತ,
ಕಡಲ ಅಲೆಗಳ ಏರಿಳಿತ...
ತುಡಿತ, ಮಿಡಿತ... ಏರಿದ ಎದೆ ಬಡಿತ.

ಇಲ್ಲವಾದರೆ,
ಇರಿಸು ಮುರಿಸು,
ಎಲ್ಲಿಲ್ಲದ ಮುನಿಸು,
ಆಕ್ರೋಶದ ಬೆಂಕಿ
ಅನುಮಾನದ ಕಪ್ಪು ಚುಕ್ಕಿ.
_____________________________________
ಈ ಮಳೆ... ಈ ಗಾಳಿ... ಕೋಲ್ಮಿಂಚು.
ಕಣ್ಣರಳಿಸಿ ಕನಸು ಕಾಣುತ್ತಿರುವ ಕಂಗಳು
ಆ ಕನಸಲ್ಲಿ ಬಣ್ಣಗಳ ಜಡಿ ಮಳೆ.
ಮಳೆಹನಿ ಧರೆಗುರುಳಿ ಚಟರ್ ಪಟರ್ ಎಂದು ಸಿಡಿವಾಗ,
ಯಾರದೋ ನೆನಪು ಸೂಯ್ ಎಂದು ಹಾಯ್ದು...
ನೀರೆರಚಿದಂತಾಗಿ...
ಮುಗುಳು ನಗೆ ಅರಳಿ... ನಾಚಿ ನೀರಾಗಿ... ಮೈಮರೆತ ಜೀವಕ್ಕೆ...
ಗುಡುಗು ಸಿಡಿದಾಗಲೆ ಎಚ್ಚರವಾದದ್ದು.
___________________________________
ಕೆಲವರು ಹೇಳದೆ ಬರುತ್ತಾರೆ
ಕೆಲವರು ಹೇಳಿ ಹೋಗುತ್ತಾರೆ
ಕೆಲವೊಂದು ಹೇಳದೆ ಇದ್ದರೆ ಚೆನ್ನ
ಕೆಲವೊಂದು ಹೇಳಿ ತೀರಿದರೆ ಚೆನ್ನ
ಕೆಲವರ ನೆನಪು ಮಾತ್ರವೇ ಚೆನ್ನ
ಕೆಲವರು ನೆಪಮಾತ್ರಕ್ಕೆ ಚೆನ್ನ
ಹೋಗುವವರು ಹೋದರೇನೆ ಚೆನ್ನ
ಇರುವವರು ಎಲ್ಲಿದ್ದರೂ ಚೆನ್ನ
ಮುದ ನೀಡಿದವರು ನೀಡುವವರೆಗೂ ಚೆನ್ನ
ಕಸಿವಿಸಿ ಕಸದಬುಟ್ಟಿ ಆಗುವವರೆಗೂ ಚೆನ್ನ
_________________________________
ಮಾತಿನ ರಬಸವೆ ಹಾಗೆ
ಕೆಲವೊಮ್ಮೆ ಚೂಪು
ಕೆಲವೊಮ್ಮೆ ಮೊಂಡು

ಹರಿತವಾದ ಮಾತು, ಹರಿದಾಡುವ ಬಾಯಲ್ಲಿ
ನುರಿತ ಮಾತುಗಾರನಿಗು ಇರಬಹುದು
ಅದರ ಚಾಳಿ.‌

ಸಿಡುಕಿದ ಮಾತು, ದುಡುಕಿದ ಮಾತು.
ಹೌದು ಎನಿಸಿದರೂ ಇಲ್ಲವೆಂಬ ಮಾತು.
ಇಲ್ಲ ಸಲ್ಲದ ಒಡಕು ತಂದಿಡುವ ಮಾತು.

ಮನಸೊಡೆದ ಮಾತು.
ಕ್ಷಮೆ ಇರದ ಮಾತು.‌
ಮೌನ ತಪ್ಪಿದ ಮಾತು.
_____________________________________
ಮನದ ಮೌನವ ಅರಿತು
ಜೊತೆಗೆ ನಡೆವವರ ನೋಡು,

ಮೌನದ ಕಲಬೆರಕೆಯ ಮರೆಯಲ್ಲಿ
ಪಿಸುನುಡಿಯ ನುಡಿವವರ ನೋಡು,

ಕಲಬೆರಕೆ ಪ್ರೀತಿಯ ನಡುವೆ
ನಿಸ್ವಾರ್ಥ ಸ್ನೇಹ ತೋರುವವರ ನೋಡು

ಪ್ರೀತಿಯ ದೇಗುಲದ ಆವರಣದಲ್ಲಿ
ಮಮತೆ ವಾತ್ಸಲ್ಯದ ಪ್ರಣತಿಗಳನ್ನು ನೋಡು

ದೇಗುಲದ ಗಂಟೆ ಮೊಳಗುತ್ತಿರುವಂತೆ
ಕಣ್ಮುಚ್ಚಿ ಕೈಮುಗಿದು ನಿಂತವರ ನೋಡು!
___________________________________

ಆಗಾಗ ಟ್ವಿಟರ್ನಲ್ಲಿ ಬರೆಯುವ ಕೆಲವು tweetsಗಳು ಇವು. ಹಾಗೆ ಸುಮ್ಮನೆ... ಬ್ಲಾಗ್ ಅಲ್ಲಿ ಒಂದು ಕಡೆ ಇರಲಿ ಅಂತ... Diary ಬರೆದಿಡುವುದು ಸ್ವಲ್ಪ ಮಟ್ಟಿಗೆ ಕಷ್ಟ!