ಲೇಬಲ್‌ಗಳು

ಬುಧವಾರ, ಸೆಪ್ಟೆಂಬರ್ 25, 2019

ಹಾಗೆ ಸುಮ್ಮನೆ

ಪ್ರೀತಿಯ ಬಗ್ಗೆ ಪಾಠ ಮಾಡೋಕೆ ಬರಬೇಡಿ. ಅಮ್ಮನ ಕೈತುತ್ತು ತಿಂದು, ಅಪ್ಪನ ಹೆಗಲೇರಿ ಬೆಳೆದವಳು ನಾನು. ಆಕಾಶಕ್ಕೆ ಮೂರೇ ಗೇಣು ಸ್ವರ್ಗ ಸುಖ.
ಕಾಂಜಿಪಿಂಜಿ love story ಇಟ್ಕೊಂಡು ಜೀವ್ನ ಬರ್ಬಾದ್ ಆಯ್ತ್ ಅನ್ಬೇಡಿ!
ದೇವರು ಕೊಟ್ಟ ಜೀವನ, ಏನಾದ್ರೂ ಸಾಧಿಸಿ ಒಮ್ಮೆ ನೋಡಿ. ದೇವರಂತಹ ಅಪ್ಪ ಅಮ್ಮನ ಕಣ್ಣಂಚಲ್ಲಿ ನೀರು ಜಿನುಗುತ್ತಲ್ಲ, ಅದು ಪ್ರೀತಿ.
.
.
.
.
ಪ್ರೀತಿ ಅನ್ನೋದು,
ಮುಂಜಾನೆ ಮಸುಕಲ್ಲಿ ತಂಪರೆವ ಸೋನೆ ಇದ್ದ ಹಾಗೆ. ತುಂತುರು ಮಳೆ ಸುರಿವಾಗ ಗಾಳಿಯಲಿ ತೇಲಿ ಬರುವ ಘಮ ಇದ್ದಹಾಗೆ. ಮಳೆ ನಿಂತರು, ಎಲೆಗಳ ತುದಿಯಲ್ಲಿ ನಿಲ್ಲೋ ಮಳೆಹನಿ ಇದ್ದ ಹಾಗೆ. ಸಂಜೆ ಸೂರ್ಯ ಮುಳುಗೋ ಹೊತ್ತಲ್ಲಿ ಆಗಸ ಕೆಂಪಿದ್ದಹಾಗೆ. ಯಾವುದು ಯಾವುದನ್ನು ಅರಸಿ ಬಂದಿದ್ದಲ್ಲ. ಅದಾಗದೇ ಒಲಿದು-ನಲಿದಿದ್ದು.
ಪ್ರೀತಿ ಕೂಡ ಹಾಗೆ.

ಭಾನುವಾರ, ಸೆಪ್ಟೆಂಬರ್ 8, 2019

ಹಾಗೆ ಸುಮ್ಮನೆ

ಪಾತ್ರಗಳು ಹಲವು ವಿಚಾರ ಒಂದೇ.
ಒಬ್ಬ ಅದು ಹುಲಿ ಎಂದ
ಒಬ್ಬ ಅದು ಹಸು ಎಂದ, ಇಲಿ ಇರಬಹುದೇನೋ ಮತ್ತೊಬ್ಬನೆಂದ. ನೆರಳ ನೋಡಿ ಹಾವು ಹಿಡಿವ ಆಟ. ಅಜ್ಜಿ ಒಬ್ಬಳು ಅದು ಸತ್ತ ಪ್ರೇತ ಎಂದಳು -ಹಿರಿಯಜ್ಜಿ ಮಾತು ವೇದವಾಕ್ಯ. ದೂರದಲ್ಲಿ ಇದ್ದ ಆಕೃತಿ ಮೇಲೆದ್ದು ಇವರಿರುವ ಕಡೆಗೆ ಬಂತು. ಮನುಷ್ಯ ತನ್ನನ್ನು ತಾನೇ ಗುರುತಿಸಲಾಗಲಿಲ್ಲ.

#ಹುಚ್ಚುಸಾಲುಗಳು

ನೆನಪಿನ ಪುಟದಿಂದ

ಹೋಗಬೇಕೆನಿಸಿದೆ ಮತ್ತೆ,
ದುಮ್ಮಿಕ್ಕುವ ಜಲಪಾತದ ಅಡಿಗಳಲ್ಲಿ 
ನಿಸರ್ಗದ ಮಡಿಲಲ್ಲಿ, ಕಾಲ ಹರಣ ಮಾಡಿ, ಜೀವನದ ಪುಟಗಳ ತಿರುವಿ ಹಾಕಿ, ಮೆಲುಕು ಹಾಕಿ, ಸಾಧಿಸಿದ್ದು ಏನಿಲ್ಲವೆನಿಸಿ, ಹೊರಳಿ ಮರಳಿ ಬರಬೇಕಿದೆ ಮತ್ತದೇ ಜೀವನಕ್ಕೆ, ಹೊಸ ಹುಮ್ಮಸ್ಸಿನಲ್ಲಿ.
ಗೆಲುವಿನ ಶಿಖರಕ್ಕೆ ಏರಿದ್ದರು ಇಳಿಯಬೇಕಿದೆ ಮತ್ತೆ ಜೋಗದ ಆಳಕ್ಕೆ..!🙏


ಬುಧವಾರ, ಸೆಪ್ಟೆಂಬರ್ 4, 2019

ಹಾಗೆ ಸುಮ್ಮನೆ...


ಕಾಯುವ ದೇವನೇ ಕೈಯನು ಮುಗಿವೆ,
ಕಾಡುವ ಕನಸನು ಪರಿಹರಿಸು

ಬೇಡಿದ ಕೊಡದಿರೆ ಚಿಂತೆಯೇ ಇಲ್ಲ, 
ಬೇಡದ ಚಿಂತೆಯ ಬಗೆಹರಿಸು

ಆಸೆಯು ಹೆಮ್ಮರ, ಆಕಾಂಕ್ಷೆ ಶಿಖರದ ಎತ್ತರ
ಪಾಮರ ಜನುಮ, ಹೆಜ್ಜೆ ಹೆಜ್ಜೆಗೂ ನೀ ನಡೆಸು.

ಆಳದ ಕಡಲಿದು, ಈಜಿದು ಬಾರದು
ಕರುಣೆಯ ತೋರಿಸಿ, ಈಜ್ವುದ ಕಲಿಸು

ಕಾಯುವ ದೇವನೇ, ಕೈಯನು ಮುಗಿವೇ
ಅಪಜಯ ಬಾರದೆ ನೀ ಹರಸು.
🙏

ಹಾಗೆ ಸುಮ್ಮನೆ ಬರೆದಿದ್ದು...


ಬುಧವಾರ, ಆಗಸ್ಟ್ 28, 2019

ದಾರಿ

ನಾವು ನಡೆದಿದ್ದೇ ದಾರಿ,
ನೆನಪುಗಳ ಬುತ್ತಿಯಲಿ, 
ಅಲ್ಲೊಂದು ಇಲ್ಲೊಂದು
ಮರೆಯಾದ ಮುಖಗಳದೆಷ್ಟೋ...
ಮಾಸದೆ ಉಳಿದ ನಗುಗಳದೆಷ್ಟೋ...
ಚಿತ್ರಪಟದ ತುಂಬೆಲ್ಲ ನೆನಪುಗಳು ಅದೆಷ್ಟೋ...
ಕಿವಿಯಲ್ಲಿ ಗುಂಯ್ ಗುಡುವ ಮಾತುಗಳದೆಷ್ಟೋ
ನಾವು ನಡೆದ ದಾರಿಯಲ್ಲಿ ತಿರುವುಗಳು ಅದೆಷ್ಟೋ 
ಕೊನೆಯಲ್ಲಿ ಉಳಿಯುವುದದೆಷ್ಟೋ
ಕನಸುಗಳು ಅದೆಷ್ಟೋ!?✨

#ಹುಚ್ಚುಸಾಲುಗಳು

ಬುಧವಾರ, ಮಾರ್ಚ್ 13, 2019

ChuTukagalu 2019

ಮಾತು ಮುಗಿದಂತಾಗಿ
ಮೌನ ಆವರಿಸಿದೆ...
ಮುನ್ನುಡಿ ಬರೆದ ಕೈಗಳು
ಅಕ್ಷರ ಮರೆತಂತಿದೆ.

ಹಿಂದೆ ಹಿಂದೆ ನಡೆದು ಬಂದ
ನೆರಳೇ ಸೋತಂತಿದೆ...
ನೆನಪಿನ ಕಡಲ ಆಳಕ್ಕಿಳಿದು
ಈಜು ಮರೆತಂತಿದೆ...

ಸೊಡರಡಿಯ ಕತ್ತಲಲ್ಲಿ
ಬೆಳಕ ಹುಡುಕಿದಂತಾಗಿದೆ.

ಪ್ರವಾಹದ ಭೀತಿ ಎದುರಾದಂತೆ
ದಡವ ಸೇರೋ ಆಸೆ, ನೂರು ದಾಟಿದೆ.

#ಹುಚ್ಚುಸಾಲುಗಳು
13 ಮಾರ್ಚ್ 19

ಕಾನನದ ಕುಸುಮ ಒಂದು
ಗುಡಿಯ ಹೊಸ್ತಿಲ ಸೇರಿದೆ,
ಗಾಳಿಯ ಅಲೆಗಳಿಗೆ ಸರಿಯುತ್ತಲು ಇಲ್ಲ
ಬಾಗುತ್ತಲು ಇಲ್ಲ.

"ಬಾಡಿ ಹೋಗುವ ಹೂವಿಗೂ ಛಲ ನೋಡು."

ಬಿರುಗಾಳಿ ಬೀಸಿತು.
ಅಂದವರ ಮುಂದೆಯೇ, ಹೂವು ದೇವನ ಪಾದವ ಸೇರಿತ್ತು.

#ಹುಚ್ಚುಸಾಲುಗಳು
16 March 2019

ಆಸೆ ಎಂಬುದು
ಆಕಾಶದ ನಕ್ಷತ್ರ
ಎಣಿಸಿದಷ್ಟು
ಕಿಸೆ ತುಂಬಿಕೊಂಡೀತು,
ಲೆಕ್ಕಕ್ಕೆ ಸಿಗದು.

#ಹುಚ್ಚುಸಾಲುಗಳು
14 ಮಾರ್ಚ್ 19

ಆಸೆಗಳ ಆಗಸಕ್ಕೆ
ಕನಸುಗಳ ಗಾಳಿಪಟ

ಹಾರಿತಾದರು ತಲುಪಲಿಲ್ಲ
ಸಾಗಬೇಕಿದೆ ಮತ್ತೆ

ರೆಕ್ಕೆ ಮುರಿಯಿತೇನೋ
ಹಕ್ಕಿಯಲ್ಲವಲ್ಲ
ಬಣ್ಣ ಮಾಸಿತೇನೋ
ಹಾರಾಟಕ್ಕೆ ಬಣ್ಣ ಮುಖ್ಯವಲ್ಲ

ಗಾಳಿಯಲ್ಲಿ ತೇಲುವ
ಕಾಗದದ ಪಟವದು
ಅರೆ ಘಳಿಗೆ ಹಾರಿ ಹರಿದು
ಬಾಲಂಗೋಚಿಯ ಗುರುತು ಸಿಗದ ಪಟ

ಆಗಸಕ್ಕೆ ಬೇಕಿದ್ದರೆ ನೀನೇ ಹಾರು
ಕನಸುಗಳು ನಿನ್ನಲ್ಲಿಯೇ ಇರಲಿ.
#ಕನಸುಗಾರ್ತಿ
08 September 2018


ಸಾಧಿಸಿದ್ದು ಇನ್ನೂ ಏನು ಇಲ್ಲ

ದೂರವಿದೆ ಸೇರಬೇಕಾದ ತೀರ

ಮುಗಿಲ ಬಣ್ಣ, ಕಡಲ ಆಳ

ಅಲೆಯಬೇಕಿದೆ ಅಲೆಮಾರಿ ಜೀವನ

ನಕ್ಷೆಯಲಿ ನಾವ್ ನಡೆದಿದ್ದೇ ದಾರಿ.

ನಕ್ಕು-ನಲಿದಿದ್ದು, ಆಡಿದ್ದು, ಓದಿ-ಕಲಿತಿದ್ದು, ಓಡಿದ್ದು, ಕಳೆದಿದ್ದು, ಕಂಡದ್ದು, ಹೇಳಿದ್ದು, ನೋಡಿದ್ದು ಎಲ್ಲಾ ಬಂದು ಹೋಗುತ್ತೆ ಆ ಕಡೆ ಕ್ಷಣ

ದೊಡ್ಡದಿದೆ ಬದುಕು.🤗

#ಹುಚ್ಚುಸಾಲುಗಳು

20 ಸೆಪ್ಟೆಂಬರ್ 2019


ಹತ್ತಿರವಿದ್ದು ದೂರ ಉಳಿದವರ ಬಗ್ಗೆ 

ಹೆಚ್ಚೆಚ್ಚು ಹುಚ್ಚೆದ್ದು ಮಾತನಾಡಿದರೇನು ಬಂತು?

ಊಟಕ್ಕೆ ಇಲ್ಲದ ಉಪ್ಪಿನಕಾಯಿ

ಎಷ್ಟು ಮಾಗಿದ್ದರೇನು ಬಂತು?

ಹೋದುದರ ಬಗ್ಗೆ ಯೋಚಿಸಿ

ಅದೇನು ಬಂತು?

ಬಂದದ್ದು ಬಂತು. 

ಅಷ್ಟೇ

#ಹುಚ್ಚುಸಾಲುಗಳು

07 ಅಕ್ಟೋಬರ್ 2019


ಹುಟ್ಯಾಕೆ ಸಾವ್ಯಾಕೆ... ಜೀವ್ನದ ಈ ದಾರಿಯಲಿ

ಅವರಿವರ ಅರಿವ್ಯಾಕೆ ಮರೆಗುಳಿ ಈ ಆತ್ಮದಲಿ

ಹಾವು ಏಣಿಯ ಆಟ, ದಾಳ ಇಳಿಸುವವನ್ ಆತ

ನಗುವಿರಲಿ, ನೋವಿರಲಿ, ಜಯವಿರಲಿ, ಸೋಲಿರಲಿ, ಅವನಾಟ ರಂಗದಲಿ

ನಾವ್ಯಾರು ನೀವ್ಯಾರು... ನಾಲ್ಕು ದಿನದ ಈ ಜಾತ್ರೆಯಲಿ.

#ಹುಚ್ಚುಸಾಲುಗಳು

07 ಡೆಸೆಂಬರ್ 2019