ಲೇಬಲ್‌ಗಳು

ಶುಕ್ರವಾರ, ಸೆಪ್ಟೆಂಬರ್ 4, 2020

ಚುಟುಕುಗಳು

ಸಾವಿರ ಕನಸಿನ ಅಲೆಗಳ ಮೇಲೆ
ಡವ ಡವ ಹೃದಯದ ಬಡಿತಗಳು.
ಎಂದಿಗೆ ಗೆಲುವು, ಯಾವುದೀ ಸೋಲು
ಕನಸಿನ ಕೂಸು ಮಲಗಿರಲು?
ಛಲವದು ಕ್ಷಣಿಕ, ಕಡಲದು ಆಳ
ಬಡಿತದ ವೇಗ ಹೆಚ್ಚಿರಲು...
ಬಾಡಿದ ಮೊಗದಲಿ, ಆಸೆಯ ಚಿಲುಮೆ
ಎಂದಿಗೋ ದಡವನು ಸೇರುವುದು?
ಮುಳುಗಡೆ ಭೀತಿ ಕಾಡಿಹುದು.

#ಹುಚ್ಚುಸಾಲುಗಳು
04 ಸೆಪ್ಟೆಂಬರ್ 2020
____________________________________
ಎಲ್ಲಾ ಮರೆತಿದ್ದೇನೆ ಎನ್ನುವಾಗಲೆಲ್ಲ ಹಾದು ಹೋಗುವ ನೆನಪುಗಳು ಗಹಗಹಿಸಿ ನಕ್ಕ ಸದ್ದು ಇನ್ನೂ ಕಿವಿಯಲ್ಲಿಯೆ ಇದೆ. ಮರೆತಿದ್ದೇನೆ ಎಂದಾಗಲೆಲ್ಲ - ಈ ಸುಳ್ಳುಗಳು ಸತ್ಯವಾಗಿಬಿಡಲಿ ಅನಿಸಿದ್ದು ಮಾತ್ರ ಸತ್ಯ.

#ಹುಚ್ಚುಸಾಲುಗಳು 
14 ಜೂನ್ 2020
____________________________________
ಇಂದು ಅದೇಕೋ ಗೊತ್ತಿಲ್ಲ.
ಮೋಡ ಹೆಪ್ಪುಗಟ್ಟಿರಲಿಲ್ಲಾ
ಆರ್ಭಟವಿರಲಿಲ್ಲ, ಬಿರುಗಾಳಿಯಿರಲಿಲ್ಲ.
ಮುನ್ಸೂಚನೆ ಎಂಬಂತೆ ಗುಡುಗಿಲ್ಲ ಸಿಡಿಲಿಲ್ಲ.
ಮಿಂಚೊಂದು ಸೀಳಿ ಕವಲುಗಳು ಒಡೆದು ಕಪ್ಪನೆಯ ಆಗಸದಿ ಬೆಳ್ಳಿಯ ಚಿತ್ತಾರ ಬಿಡಿಸಿರಲಿಲ್ಲ...ಮಣ್ಣಿನ ವಾಸನೆಯ ಹೊತ್ತು ತರುವ ಉಸ್ತುವಾರಿ ಗಾಳಿಗೆ ಇರಲಿಲ್ಲ.
ಮಳೆ ಸುರಿಯಿತು, ಸದ್ದಿಲ್ಲ.

#ಹುಚ್ಚುಸಾಲುಗಳು
21 ಮೇ 2020
_____________________________________

ಎಷ್ಟು ಮಳೆ ಸುರಿದರೆ ಏನು ಬಂತು...
ಪಾಪದ ಬುತ್ತಿ ತೊಯ್ಯುವುದೇನು??
ಎಷ್ಟು ಸೆಣಸಾಡಿದರೇನು ಬಂತು...
ತಪ್ಪುಗಳ ಮಧ್ಯೆ ಸರಿಗಳೆದ್ದು ಕಾಣ್ವುದೇನು??

#ಹುಚ್ಚುಸಾಲುಗಳು
06 ಏಪ್ರಿಲ್ 2020
_____________________________________

ಶುಕ್ರವಾರ, ಜುಲೈ 31, 2020

ಹಬ್ಬ ಹರಿದಿನ...🤗🤓

ಎಲ್ಲರಿಗೂ ನಮ್ಮನೆ ವರಮಹಾಲಕ್ಷ್ಮಿ ದರ್ಶನ ಮಾಡಿಸೋಣ ಅಂತ.... ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.✨✨✨❤️❤️❤️☺️☺️❤️❤️❤️ ✨✨✨
ಲಕ್ಷ್ಮಿಯ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ. 🙏😍
 🙈❤️
ನಮ್ಮನೇಲಿ ಈ ಹಬ್ಬ ತುಂಬಾ ಜೋರು... ಲಕ್ಷ್ಮಿಗೆ ಈ ಬಾರಿ ಅಲಂಕಾರ ಮಾಡಿದ್ದು ನಾನೇ... ಪ್ರತಿಸಲ ಅಕ್ಕ- ಅಮ್ಮನ ಕೆಲ್ಸ ಆಗಿತ್ತು. ನಾನೇನಿದ್ರೂ ಸರ ಸ್ವಲ್ಪ ಸೊಟ್ಟ ಇದೆ... ಇಲ್ಲಿ ನೆರಗೆ ಸರಿ ಬಂದಿಲ್ಲ ಅಂತ ಹೇಳೋದಿತ್ತು ಅಷ್ಟೇ. ಅಮ್ಮನದು ಒಂದು ಅಭ್ಯಾಸ ಇದೆ... ಪ್ರತಿ ವರ್ಷ ವರಮಹಾಲಕ್ಷ್ಮಿ ಗೆ ಅವರು ತಗೊಂಡಿರೋ ಹೊಸ ಸೀರೆ ಉಡಿಸೋದು, ಆಮೇಲೆ ಅವರು ಅದನ್ನ ಬಳಸೋದು. ಇದರಿಂದಾಗಿ ಅಮ್ಮ ವರ್ಷಕ್ಕೆ ಒಂದಾದರೂ ಸೀರೆ ತಗೋತಾರೆ. ❤️ ಬೇರೆ ಯಾವ ಹಬ್ಬಕ್ಕೂ ನಾವು ಹೊಸ ಬಟ್ಟೆ ತಗೊಳೋ ಅಭ್ಯಾಸ ಇಟ್ಕೊಂಡಿಲ್ಲ. 🙈❤️


ಫ್ರೆಂಡ್ ಒಬ್ಬರು ಕೇಳಿದ್ರು ಇವೆಲ್ಲ ಶೋಕಿ, ಅಲಂಕಾರ ಅಂತೆ- ಸೀರೆ ಅಂತೆ... ಸುಮ್ಮನೆ ಕಲಶ ಒಂದು ಇಟ್ಟು ಪ್ರಾಣ ಪ್ರತಿಷ್ಠಾಪನೆ ಮಾಡಿ ಮುಗೀತು ಅನಿಸಬೇಕು ಅದು ಭಕ್ತಿ ಅಂತ... ಅದಕ್ಕೆ ನಾ ಹೇಳ್ದೆ... ಯಾವಾಗ್ಲೂ ದೇವರು ನಮ್ಮನೆಗೆ ಬರಲಿ ಅಂತ ಆಸೆ ಇರೋರಿಗೆ ಈ ರೀತಿ ದೇವರ ಕೂರಿಸುವ, ನಮ್ಮ ಹಾಗೆ ಅಲಂಕಾರ ಮಾಡಿ, ನಾವು ಉಡುವ ರೀತಿ ಸೀರೆ ಉಡಿಸಿ ದೇವರ ಮನೆಯಲ್ಲೋ, ಮನೆಯ ಅಂಗಳದಲ್ಲೋ ಕೂರಿಸಿದ್ರೆ, ಸಾಕ್ಷಾತ್ ದೇವರೇ ಬಂದರೇನೋ - ಕೂತಿದ್ದಾರೇನೋ ಅನ್ನುವ ಸಂತೋಷ ಆಗುತ್ತೆ... ಇದು ನಮ್ಮ ಭಕ್ತಿ, ನಮ್ಮ ಆಸೆ ಅಂತ.😍❤️✨✨

ಈ ರೀತಿ ದೇವರ ಕೂರಿಸುವ ಹಿಂದಿನ ಮೂಲ ಉದ್ದೇಶ ದೇವರಾಣೆ ನಂಗೆ ತಿಳಿದಿಲ್ಲ. ಆದರೆ ಹೀಗೆ ಮಾಡಿದಾಗ, ಆಗುವ ಸಂತೋಷ ಮಾತ್ರ ನನಗೆ ತಿಳಿದಿದೆ. ವರಮಹಾಲಕ್ಷ್ಮಿ ವ್ರತದ ದಿನ ಲಕ್ಷ್ಮಿಯನ್ನು ಹಾಗೂ ಗೌರಿ ಗಣೇಶ ಹಬ್ಬದ ದಿನ  ಗೌರಿ ಗಣಪ ನ ಹೀಗೆ ಕೂರಿಸಿ ಅಭ್ಯಾಸ... ಅದೆಷ್ಟೋ ಬಾರಿ ಏನೋ ಕೆಲಸದ ನಡುವೆ ಆ ಕಡೆ ತಿರುಗಿ ನೋಡಿದಾಗ ನಿಜವಾಗ್ಲೂ ಯಾರೋ ಇದ್ದಾರೆ ಅಲ್ಲಿ ಅನಿಸಿದ್ದು ಆಗಿದೆ. ಈಗ ಪ್ರತಿ ಬಾರಿ ದೇವರ ಕೂರಿಸಿದಾಗ ಅವರನ್ನು ನಮ್ಮನೆ ಅತಿಥಿಯ ಹಾಗೆ ಮಾತಾಡಿಸಿಕೊಂಡು ಇರ್ತೀವಿ..." ಏನಮ್ಮಾ ಸೀರೆ ಚನ್ನಾಗಿದಿಯ?", " ಸರ ಇಷ್ಟ ಆಯ್ತಾ...? ನಾನೇ ಸೆಲೆಕ್ಟ್ ಮಾಡಿದ್ದು..." 🙈  ನೇವೆದ್ಯ ಆಗುವ ಹೊತ್ತಿಗೆ ರೆಗಿಸೋದು... ತಿನ್ನಮ್ಮ ತಿನ್ನು.. ಎಲ್ಲ ನಿನಗೋಸ್ಕರ ಮಾಡಿದರೆ ನಮ್ಮಮ್ಮ... ಎಲ್ಲ ಖಾಲಿ ಮಾಡಿಬಿಡಬೇಡ ಆಮೇಲೆ ನಾನೇ ತಿಂದ್ಬಿಟ್ಟೆ ಅಂತ ಬೈತಾರೆ..."ಅಂತ. 🙈🙈❤️❤️

ಅಲ್ಲಿಗೆ ವರಮಹಾಲಕ್ಷ್ಮಿಯ ಕಥಾರ್ತವೂ ಸಮಾಪ್ತಿಯಾಯಿತು. ❤️🙈

 

ಬುಧವಾರ, ಮೇ 13, 2020

ಗುಡಿ ಒಂದಿದೆ...

ಗುಡಿ ಒಂದಿದೆ.
ವಿಗ್ರಹಗಳಿಲ್ಲ.
ಚಂದದ ಕೆತ್ತನೆಯ ಕಂಬಗಳು,
ಮೆಟ್ಟಿಲುಗಳ ಏರಿಸಿದ
ಗರ್ಭಗುಡಿಯ ಬಾಗಿಲು ತೆರೆದಿದೆ
ದೇವರ ವಿಗ್ರಹಗಳು-ಈಗಿಲ್ಲ.

ಕಲೆಯ ದೇಗುಲದಲ್ಲಿ ಶಿಲ್ಪಿಯೇ ದೇವರು.
ಎಲ್ಲಾ ಚಂದ ಇದ್ದಿದ್ದಾಗ ಹೇಗೆಲ್ಲ ಇದ್ದಿರಬಹುದು?
ಜನ ಜಂಗುಳಿ ಜಾತ್ರೆ, ಆಗ ಆರತಿ ಇದ್ದೀತೆ?
ಶಂಕು ಜಾಗಟೆ ಮೊಳಗಿರಬಹುದೇ?

ನಮ್ಮ ಕರ್ನಾಟಕ
ನಮ್ಮ ಹೆಮ್ಮೆ✨