ಲೇಬಲ್‌ಗಳು

ಸೋಮವಾರ, ನವೆಂಬರ್ 28, 2016

ಗಿರ್ಗಿಟ್ಲೆ

ಹೀಗೆ ಯೋಚನೆಗಳ ಸೆರೆಮನೆಯಲ್ಲಿ ಬಂಧಿಯಾಗಿದ್ದಾಗ, ಸುಂದರ ಮರಗಳ ಚಿತ್ರ ತಲೆಯಲ್ಲಿ ಗಿರ್ಗಿಟ್ಲೆ ಹೊಡೆಯುವುದಕ್ಕೆ ಶುರುವಾಯಿತು.

ನಮ್ಮ ಮುದ್ದು ಪೆದ್ದು ಜೀವನ ಪ್ರೀತಿ - ನಗು- ಸಾಧನೆ - ಸಾರ್ಥಕತೆ - ತಾಳ್ಮೆ - ವಿಶ್ವಾಸ-ನಂಬಿಕೆ - ಛಲ- ಬಲ- ಒಲವು - ಗೆಲವು - ಗುರಿ ಅನ್ನೋ ಹಲವು ಪದಗಳ ಜೊತೆ ಅಥವ ದ್ವೇಷ - ಅಳು - ಸೋಲು - ಸ್ವಾರ್ಥ - ರೋಷ - ಅಳುಕು - ಹಿಂಜರಿಕೆ - ದ್ರೋಹ - ನಿರಾಸೆ ಅನ್ನೋ ಪದಗಳ ವಿರುದ್ಧ ಸಾಗುತ್ತಾ ಇದೆ ಅಂತ. ಒಂದು ಸಂತಸದ ಹಿಂದೆ ಒಂದು ದು:ಖ, ಒಂದು ಸೋಲಿನ ಮುಂದೆ ಒಂದು ಗೆಲುವು! Plus Minus ಗಳ ಲೆಕ್ಕಾಚಾರ... ಲೈಫ್ ಇಷ್ಟೇನ??
ಪೂರ್ಣ ವಿರಾಮ ಅಥವ ಕಾಮ ಪಕ್ಕದಲ್ಲಿ ಒಂದು ಪ್ರಶ್ನಾರ್ಥಕ ಚಿನ್ಹೆ
..,?
~ ಪ್ರಜ್ಞಾ ಕನಸುಗಾರ್ತಿ 💞


ಮಂಗಳವಾರ, ಏಪ್ರಿಲ್ 26, 2016

ChuTukugaLu

ಜೀವಕೆ ಬಾಳಿನ ಆಸರೆಯಂತೆ
ಕಣ್ಣಿಗೆ ರೆಪ್ಪೆಯ ಬರವಸೆಯಂತ
ಸಂತಸ ದುಃಖದ ಕೈಸೆರೆಯಂತೆ
ಆತ್ಮಕ್ಕೆ ದೇಹದ ಸೆರೆಮನೆಯಂತೆ
ಅಂತೆ ಕಂತೆಗಳ ಪಂಜರವಂತೆ
ಪಂಜರದ ಗಿಳಿಮರಿ ನಾವಂತೆ.
೦೨ ಜನವರಿ ೨೦೧೬
___________________________________________________________
 ಮೌನದ ಮಾತುಗಳ ನಡುವೆಯೇ
ಹೂವೊಂದು ಅರಳಿದೆ...
ಮೊಗ್ಗಾಗಿದ್ದ ಮನಸ್ಸು
ಬಾನಿನ ಅಂಗಳಕ್ಕೆ ಜಿಗಿದಿದೆ...
ಹೇಳಿ ಬಿಡು ಮನವೇ
ಆ ಒಲವ ಪದವ...
೧೦ ಜನವರಿ ೨೦೧೬
_____________________________________________________________ 
ಕನಸಿನ ಕಡಲು ನನ್ನ ಕವನ
ಮಾಯೆಯ ನೌಕೆ ನನ್ನ ಕವನ
ಪದಗಳಿಲ್ಲದ ಸಾಲು ನನ್ನ ಕವನ
ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದ
ಇಳಿಜಾರು ನನ್ನ ಕವನ...
೧೧ ಜನವರಿ ೨೦೧೬
 _______________________________________________________________
 ಆಸೆಗಳು ಯಾಕೆ ಬರುತ್ತೆ?
ಕನಸುಗಳು ಯಾಕೆ ಬೀಳುತ್ವೆ!?
ಪ್ರೀತಿ ಯಾಕೆ ಕಾಣ್ಸಲ್ಲಾ?!
ದ್ವೇಷ ಯಾಕೆ ಸುಡುತ್ತೆ?
ಪ್ರಶ್ನೆಗಳು - ಉತ್ತರಗಳು ಯಾಕೆ ಹುಡುಗಾಟ ಆಡುತ್ತೆ!?
________________________________________________________________
ಮೌನ ಪ್ರತಿಭಟನೆ
ಮನದ ಮಾತುಗಳು ನಿಶ್ಯಬ್ದ
ಕಪ್ಪು ಬಿಳುಪಿನ ಕನಸಲ್ಲೂ 
ಬಣ್ಣಗಳ ಮರ್ಮ
ಆಸೆಯ ಕಣ್ಗಳಿಗೆ
ಅಸೂಯೆಯ ಕಾಡಿಗೆ
ಅರ್ಥವಾಗದ ಕಥೆಗೆ
ಹಿನ್ನುಡಿಯ ಭರವಸೆ. 
೦೭ ಏಪ್ರಿಲ್ ೨೦೧೬
___________________________________________________________________
ಕಡಲಲೆಗಳ ಸದ್ದು
ಕಡಲ ತೀರದ ಮೌನ
ಗದ್ದಲದಲ್ಲೂ ಸದ್ದಿಲ್ಲದ ಮನಸ್ಸು
ಇನ್ನೇನು ಅಲೆಯೊಂದು ಬಂತು ನನ್ನೆಡೆಗೆ
ಮಿಂದು ತಣಿಯುವ ಸಮಯ
ಎಚ್ಚರವಾದಾಗ, ಕನಸಲ್ಲೂ ನನಸಾಗದ ಕನಸು!
೧೧ ಏಪ್ರಿಲ್ ೨೦೧೬
___________________________________________________________________ 
ಜೂಜಾಟ ಈ ಬದುಕು
ಹಿಂದಿದ್ದ ಛಲವಿಲ್ಲ ಹಠವಿಲ್ಲ
ಗುರಿಗೆ ಗುರುವಿನ್ನಿಲ್ಲ
ಮನದ ಗಡಿ ದಾಟಿರಲು
ಪರದೇಶಿ ವೈಭೋಗ
ತಾನಿಲ್ಲ ತನ್ನದಲ್ಲ
ತನ್ನವರಾರು ಅರಿವಿಲ್ಲ
ಜೂಜಾಟ ಈ ಬದುಕು!
೧೯ ಏಪ್ರಿಲ್ ೨೦೧೬
____________________________________________________________________ 
ಮನಸಿನ ಗಜಿಬಿಜಿಯಲ್ಲು
ಮಳೆ ಹನಿಗಳ ಹಾವಳಿ
ತುಸು ಹೆಚ್ಚೇ ಆವೇಗ
ಹುಚ್ಚು ಮನಸಿಗೆ ಆಗಾಗ.
ಬರಿದಾದ ಮನದಲ್ಲೂ
ಸಂತಸದ ಮಾಯೆ
ತುಸು ತಂಪಾದ ಗಾಳಿಯಲ್ಲೂ
ಕಾಡಿದೆ ರೈತನ ಛಾಯೆ.
೨೫ ಏಪ್ರಿಲ್ ೨೦೧೬
___________________________________________________________________

ChuTukugaLu

ಸರ್ವರ ಮನದಲಿ ನೆಲೆಯೂರಬೇಕಿಲ್ಲ
ನೆನೆದವರ ಸಂಗ ನಿರಂತರವಿರಬೇಕಿಲ್ಲ

ಜೀವನ ಚಕ್ರದ ಗಾಡಿ ನಿಲ್ಲುವುದಿಲ್ಲ
ನಿಂತಾಗ ಅದ ನೋಡಲು ನಾನಿರುವುದಿಲ್ಲ.

#ಹುಚ್ಚುಸಾಲುಗಳು.         21 ಜನವರಿ 2015
__________________________________________________

ಕಣ್ಣಿನ ಪುಟ್ಟ ಚಿಪ್ಪಲ್ಲಿ ಅವಳದೇ ಒಂದು ಲೋಕ,
ಅವಳ ಕನಸಿನ ತೀರಕ್ಕೆ ಮಿತಿಯಿಲ್ಲಾ.
ಕಡಲ ಕಾಯುವ ದೊಣ್ಣೆ ನಾಯಕನಪ್ಪಣೆ ಬೇಕಿಲ್ಲ!
ಕಡಲ ಕಣ್ಣಲ್ಲಿಯೂ ಅವಳದೆ ಕನಸು!
_______________________________________________________

ಕಡಲ ಅಲೆಗಳಲಿ
ತೇಲಿ ಬಿಡಬೇಕಿದೆ ಒಂದು ಚೀಲ... 
ಕೂಡಿಟ್ಟ ಕನಸನು ಮೂಟೆ ಕಟ್ಟಿ
ಬರೆದಿಟ್ಟ ಕವನಗಳ ಜೊತೆಗೆ ತುರುಕಿ
ಬಚ್ಚಿಡಲು ಹೇಳಬೇಕಿದೆ
ಅಲೆಗಳ ಕಿವಿಯಲ್ಲಿ!
೩೧ ಮೇ ೨೦೧೫
_______________________________________________________
ಮಳೆಯ ಗುಂಗುನಲಿ
ನಿನ್ನ ನೆನಪಿರಲಿ
ತೇಲಿ ಬಿಡುವೆನೊಂದು ಕವನ.
ಹಾಳೆ ದೋಣಿಯಲಿ
ಪ್ರೀತಿ ಮಾತಿರಲಿ
ತೇಲಿ ಬಿಡು ನೀ ಅದನ.

ಕಡಲ ಅಲೆಗಳಲಿ
ನಿಂತ ನೀರಿನಲಿ
ಹಾಯ ದೋಣಿ ನನ್ನ ಕವನ
ಸುಡುವ ಬಿಸಿಲಿರಲಿ
ಕೊರೆವ ಚಳಿಯಿರಲಿ
ಸಾಗುತಿರಲಿ ನಿನ್ನೆಡೆಗೆ ನನ್ನ ಪಯಣ!
೦೨ ಜೂನ್ ೨೦೧೫
________________________________________________________
 ಕರಾಳ ದಿನ
ಕಣ್ಣಲ್ಲಿ ಕಪ್ಪು ಕತ್ತಲು
ಮನಸ್ಸಲ್ಲಿ ಕೋಲ್ಮಿಂಚು
ಮಾತಿಗೆ ಸಿಗದ ಮೌನ
ಗುರಿಯ ಮುಚ್ಚಿಟ್ಟ ಕಂಬನಿ ಮಂಜು
ಹುಡುಕಾಟದಲ್ಲಿ ದಣಿವು
ಬಾಯಾರಿಕೆಗೆ ಒಂದೇ ಪರಿಹಾರ- ಛಲ!
೨೫ ಜೂನ್ ೨೦೧೫
________________________________________________________
ಮೌನದಲ್ಲಿ ಮಾತುಗಳ ದೊಂಬರಾಟ. 
ಮನದ ಕನ್ನಡಿಯಲ್ಲಿ ಕಾಡಿಸುವ ಕನಸುಗಳು.
ಹಿಡಿಯುವವರಿಲ್ಲ ಆಲೋಚನಾ ಲಹರಿ.
ತಡೆಯುವವರಿಲ್ಲ ಮೂಕ ಸಂಭಾಷಣೆ.
ಹುಚ್ಚು ಕಲ್ಪನೆಯ ಹುಚ್ಚು ಸಾಲುಗಳು.

ಮಳೆಯ ಅಬ್ಬರದಲ್ಲಿ ಮನದ ಪರದಾಟ.
ಗೈರು ಹಾಜರಾದ ಕನಸಿನ ಕಾಟ.
ತೋಚಿದ್ದು ಗೀಚಿದ್ದು ಪದಗಳ ಆಟ.
ಮಳೆಹನಿಯ ತಂಪಿಲ್ಲ.
ಪದ-ದನಿಗಳ ಇಂಪಿಲ್ಲ.
೧೬ ಆಗಸ್ಟ್ ೨೦೧೫
_________________________________________________________
ಟೊಳ್ಳು ಮನಸುಗಳ ನೂರೆಂಟು ಸುಳ್ಳುಗಳು
ಅಂತರಾತ್ಮದ ಮಾತಿಗಿಲ್ಲ ಹುಲ್ಲುಕಡ್ಡಿಯ ಬೆಲೆ
ಜೀವನ ಶಾಶ್ವತ ಹಾವು ಏಣಿ ಆಟ
ಅವ ಆಡೆಂದಾಗ ಆಟ
ಅವ ಸಾಕೆಂದಾಗ ಕುಂಭಿ ಪಾಕ!
೧೨ ಅಕ್ಟೋಬರ್ ೨೦೧೫
_________________________________________________________
ಕೆಲವರು ಜೊತೆಯಲ್ಲಿರ್ತಾರೆ
ಕೆಲವರು ಜೀವನದಲ್ಲಿರ್ತಾರೆ
ಹಲವರು ಕಣ್ಮುಂದೆನೇ ಇರ್ತಾರೆ
ಆದರೆ ಕೆಲವರು ನೆನಪಲ್ಲಿ ಮಾತ್ರ ಇರ್ತಾರೆ...

ಇಂದು ಇದ್ದೋರು ನಾಳೆ ಇರೋಲ್ಲ
ನೆನ್ನೆ ಇದ್ದ ನಂಟು, ಇಂದು ಅದದೆ ಜನರ ನಡುವೆ ಇಲ್ಲ
ಅವರ ಮುಖವಾಡ-ನಮ್ಮ ಮುಗ್ಧತೆ ಎರಡರ ಪ್ರದರ್ಶನ.
ಜೀವನದ ಮುಂದಿನ ಮೆಟ್ಟಿಲು ಹತ್ತುವ ಸಮಯ.
೧೨ ಡಿಸೆಂಬರ್ ೨೦೧೫
______________________________________________________________
ಹೀಗೆ ಟ್ವಿಟ್ಟರ್ ಅಲ್ಲಿ ಗೀಚಿದ ಸಾಲುಗಳು .