ಲೇಬಲ್‌ಗಳು

ಗುರುವಾರ, ನವೆಂಬರ್ 20, 2014

ಮಾಯೆಯ ಪಿತೂರಿ

ಮೋಡಕ್ಕೆ ತಿಳಿದಿರಲಿಲ್ಲಾ
ಮಳೆಯೆಂಬ ಮಾಯೆಯು
ಅಡಗಿಹುದು ಅದರೊಳಗೆಂದು.

ಮಳೆಗೂ ತಿಳಿದಿರಲಿಲ್ಲ
ಮಾಯೆಯೊಂದಿಹುದು ಅದರೊಳಗೆಂದು.

ಬೆಂಕಿಪೊಟ್ಟನದ ಕಡ್ಡಿಗೆ
ತಿಳಿದಿರಲಿಲ್ಲಾ
ತನ್ನ ತಲೆಯ ಮೇಲಿನ ಟೊಪ್ಪಿ ಆತ್ಮಾಹುತಿಯ ತಯಾರಿಯಂದು.

ಬೆಂಕಿಪೊಟ್ಟಣಕ್ಕೊ ತಿಳಿದಿರಲಿಲ್ಲಾ
ತನ್ನ ಬಟ್ಟೆ
ಕೊಲೆಯ ಪಿತೂರಿಗೆ ಎಂದು!
-------------------------
೧೮/೧೧/೧೪ ರಂದು ಬರೆದ್ದಿದ್ದು!

ಟ್ವಿಟ್ಟರ್ ನಲ್ಲಿ ನಾನು ಇರಲು ಕಾರಣ ಈ ನನ್ನ ಹುಚ್ಚು ಹನಿಗವನಗಳು. ಅಲ್ಲಿ ಹಲವರ ಮೆಚ್ಚುಗೆ/ಟೀಕೆಗಳು ನನ್ನನ್ನು ಮತ್ತೂ ಬರೆಯುವಂತೆ ಪ್ರೋತ್ಸಾಹಿಸುತ್ತದೆ... ಜೀವನದ ಸಾರ್ಥಕತೆಗೆ ಒಂದು ಅಡಿಪಾಯ ಇದಾಗಿರಬಹುದೇನೊ!

ಮಂಗಳವಾರ, ನವೆಂಬರ್ 11, 2014

ಹೀಗೆ ಒಂದು ನೆನಪು...

ಬಹಳ ದಿನಗಳಾಯಿತು ನಾನು ಈ ಬ್ಲಾಗ್ ಗಿಗಾಗಿ ಏನನ್ನಾದ್ರು ಬರೆದು.... 
ಏನನ್ನೋ ಯಾಕೆ ಮೊನ್ನೆ ಮೊನ್ನೆ ಬಿಡಿಸಿದ ಒಂದು ಚಿತ್ರದ ಬಗ್ಗೆನೇ ಬರಿಯೋಣ ಅಂತ ಯೋಚಿಸಿ ಬರಿತಿದ್ದೇನೆ ಈ " ಹೀಗೆ ಒಂದು ನೆನಪು."
ಒಂದು ಮೊದಲ ಚಿಕ್ಕ ಪ್ರಯತ್ನ 

ನವೆಂಬರ್ ೦೯ ೨೦೧೪ ಒಬ್ಬ ಮಹಾನ್ ಚೇತನ ಹಾಗು ಚಿರ ಸ್ಮರಣೀಯ ವ್ಯಕ್ತಿಯ ೬೦ನೇ ಜನ್ಮ ದಿನದ ನೆನಪನು ತರಿಸ್ತು. 
ಆತ ನಮ್ಮೊಟ್ಟಿಗೆ ಇದ್ದಿದ್ದು ಕೇವಲ ೩೬ ವರುಷ! ನಮ್ಮೊಟ್ಟಿಗೆ ಅಂದ್ರೆ ತಪ್ತಿಳಿಬೇಡಿ ಅವರು ಜೀವಂತ ಇದ್ದಾಗ ನಾ ಇನ್ನೂ ಹುಟ್ಟೇ ಇರ್ಲಿಲ್ಲ. ಲೆಕ್ಕ ಪಕ್ಕ ಇದ್ದರೆ ಈ ಹೊತ್ತಿಗೆ ಅವರ ಜೀವಮಾನ ೧೯೫೪-೧೯೯೦ ಅಂತ ಎಣಿಸಿರ್ತಿರ!

Wikipedia  ತಿಳಿಸೋ ಪ್ರಕಾರ ತನ್ನ ಜೀವಮಾನದ ೩೬ ವರ್ಷಗಳಲ್ಲಿ ಈ ವ್ಯಕ್ತಿ ಕೇವಲ ೧೨ ವರ್ಷ (೧೯೯೭೮-೧೯೯೦) ಸಿನಿಮಾ ರಂಗದಲ್ಲಿ ಇದ್ದದ್ದು. ಅಂದ್ರೆ ೨೪-೨೫ನೇ ವಯಸ್ಸಿಗೆ ಗಾಂಧೀನಗರದ ಬಹುಬೇಡಿಕೆಯ ನಟ, ನಿರ್ದೇಶಕ, ನಿರ್ಮಾಪಕ, ಸ್ಕ್ರೀನ್ ಪ್ಲೇ ರೈಟರ್ ಕೂಡ ಆಗಿ ಮನೆ ಮಾತಾಗಿದ್ರು ಅಂತ ಅರ್ಥ! 
ಅಂದ ಹಾಗೆ ೧೨ ವರ್ಷಗಳಲ್ಲಿ ಇಷ್ಟೆಲ್ಲಾ ಪ್ರತಿಭೆ ಇರೋ ಹಾಗು ಇಷ್ಟೆಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರೋ ವ್ಯಕ್ತಿ ಅಬ್ಬಬ್ಬಾ ಅಂದ್ರೆ ಎಷ್ಟು ಸಿನಿಮಾ ಮಾಡಿರಬಹುದು? ೧೨? ೨೪? ೩೬? ಹೋಗ್ಲಿ ೪೮?? ನಂಬಲಿಕ್ಕೆ ಅಸಾಧ್ಯ ಅನಿಸಿದರು ನಿಜ! ಬರೋಬ್ಬರಿ ೮೦ ಚಿತ್ರಗಳಲ್ಲಿ ನಾಯಕ ನಟನಾಗಿ ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತ ಆಗಿಬಿಟ್ರು!! ಬರಿಯ ಸಿನಿಮಾ ಕ್ಷೇತ್ರ ಆಗಿದ್ರೆ ಸುಮ್ನಿರಬಹುದಿತ್ತೇನೋ ಆದ್ರೆ ಮೆಟ್ರೊ ರೈಲ್ ಅಂತೆ, ಸಂಗೀತ ಅಂತೆ, ನಾಟಕವಂತೆ, ಹೊಸ ತಂತ್ರಜ್ಞಾನವಂತೆ, ಲೋಕಾಭಿವೃದ್ಧಿ ಯೋಚನೆಗಳಂತೆ!! ಭಯಂಕರ!!

ಸಿನಿಮಾ ಹಾಡುಗಳು, ಕಥೆಗಳು ಒಂದು ಕಡೆಗೆ ಆದರೆ, "ಮಾಲ್ಗುಡಿ ಡೇಸ್ ನ (MalguDi Days)"  ತಾನಾ ನ ತಾನ ನನ ನಾ  ಬರಿಯ ಗುನುಗುವ ಹಾಡು ಹೊಸ ಅಲೆ ಎಬ್ಬಿಸಿಬಿಟ್ಟಿತ್ತು. ಅವರು ಅಗಲಿ ವರುಷಗಳಾದ್ರು ನನ್ನಂತಹ ಯುವ ಜನಾಂಗಕ್ಕೆ ಸ್ಫೂರ್ತಿ ಆಗಿ ಆಕಾಶದೆತ್ತರಕ್ಕೆ ನಿಲ್ಲುತ್ತಾರೆ ಈ ವ್ಯಕ್ತಿ!

ನಾ ಮಾತಾಡ್ತಿರೋದು ಯಾರ್ ಬಗ್ಗೆ ಅಂತ ತಿಳಿದಿರ್ಬೇಕು ಅಲ್ವ?  ಆಟೋ ರಾಜ ಅನ್ನಿ, ಕರಾಟೆ ಕಿಂಗ್ ಅನ್ನಿ, ಶಂಕರಣ್ಣ ಅನ್ನಿ, ಶಂಕರ್ ನಾಗ್ ಅನ್ನಿ, ಈ ಪ್ರಜ್ಞಾ ಡ್ರೀಮರ್ ಗೆ ಮಾತ್ರ ಇವರು ಒಬ್ಬ ಯಶಸ್ವಿ ಕನಸುಗಾರ ಹಾಗು ಇನ್ಸ್ಪಿರೇಷನ್ ಗಳಲ್ಲಿ ಒಬ್ಬರು. 

ಅವರಿಗೆ ನನ್ನ ಚಿತ್ರ ನಮನ. 
ಮೊದಲನೇ ಆಯಿಲ್ ಪೇಂಟಿಂಗ್ ಭಾವಚಿತ್ರ. ರೇಖೆಗಳು ಅವರಿಗೆ ಹೋಲಿಕೆ ಆಗುವಷ್ಟು ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದಲ್ಲಿ ಮರು ಪ್ರಯತ್ನ ಅಂತ ಒಂದು ಖಂಡಿತವಾಗಿಯೂ ಇದೆ ಅಂತ ನನ್ನ ಅಭಿಪ್ರಾಯ! :)

ಸೋಮವಾರ, ಆಗಸ್ಟ್ 18, 2014

ಹೀಗೆ ಗೀಚಿದ ಸಾಲುಗಳು...

ಎಲ್ಲರು ಬದಲಾಗ್ತರೆ..
ಯಾರು ಊಳಿಯೋದಿಲ್ಲ...

ಏನೊಂದು ಒಲಿಯುವುದಿಲ್ಲ...

ನಕಾರಾತ್ಮಗಳ ಸಹವಾಸದಲ್ಲಿ ಆಶಾವಾದಿಯ ಮಾರಣ ಹೋಮ!
--------------------

ಕಾನನದ ಕಾಲು ದಾರಿಯಲ್ಲಿ ಕಲ್ಲೊಂದ ಎಡವಿ,
ಅಯ್ಯೋ ಎನಿಸಿ-ಮರದ
ಪೊಟರೆಯಲ್ಲಿಟ್ಟು ಬಂದೆ.

ಮುಂದೊಂದು ದಿನ ಆ ದಾರಿಯಲಿ ಕಂಡೆ
ಅಲ್ಲಾಗಿತ್ತು ದೇವರೊಬ್ಬರ ಪ್ರಾಣ ಪ್ರತಿಷ್ಠೆ!
11/೦8/14
----------------
ಆಸೆಗಳ ಮೂಟೆ ಕಟ್ಟಬೇಕಿದೆ,
ಮನಸನ್ನು ಹಿಡಿತದಲ್ಲಿಡಲು.
ಅರಬ್ಬಿ ಸಮುದ್ರಕ್ಕೆ ಹೋಗುವ ಆಸೆಯೊಂದಿದೆ,
ಕಟ್ಟಿಟ್ಟ ಆಸೆಗಳ ಮೂಟೆಯನು ತೇಲಿಬಿಡಲು.
೨೯/೦೭/೧೪

ಏನು ಗೀಚಲು ಉಳಿದಿಲ್ಲ
ಗೀಚಿದ ಓದಲು ಯಾರಿಲ್ಲ
ಇದ್ದರೂ ಕೊಡಲು ಮನಸ್ಸಿಲ್ಲ
ಮನಸ್ಸಿನ ಮಾತಿದು, ಮಿತಿಯಿಲ್ಲಾ...
----------

ಹಿಂದಿರುಗಿ ಬಾರದ ಕನಸಿನ ಲೋಕಕ್ಕೆ
ಹೋಗ್ಬೇಕಿದೆ ನಾನು.
ಕನಸ್ಸಂದರೆ ಕನಸಲ್ಲಾ,
ನನಸಾಗಿಯು ಕನಸಾಗಿ ಉಳಿದಿರುವ ಭ್ರಮೆಗೆ ಜಾರಬೇಕಿದೆ ಎಂದಿನಂತೆ ನಾನು!

೨೫/೭/೧೪
----------------
ಹೀಗೆ ಒಂದು ದಿನ ಯೋಚನೆ ಮಾಡ್ತಿದ್ದೆ, ನಾನ್ಯಾಕೆ ಹೀಗೆ ಅಂತ. ವಯಸ್ಸಿಗೆ ಮೀರಿದ ಪ್ರೌಢತೆ, ಆಸೆ, ಕನಸು,...ಹುಮ್ಮಸ್ಸು, ನನ್ನದೆ ಒಂದು ಜಗತ್ತು ಕಟ್ಟಿಕೊಳ್ಳೋ ಆಕಾಂಕ್ಷೆ.

"ನಾನು ಯಾರು?"
ಈ ನಡುವೆ ಈ ಪ್ರಶ್ನೆ ಬಹಳ ಕಾಡುತ್ತೆ ನನ್ನ!

ಯಾರು ಬೇಡ ಎನಿಸುತ್ತೆ ಅವಗವಗ
ಅನಿಸಿದ್ ತಕ್ಷಣ ಅಮ್ಮನ "ಚಿಟ್ಟಿ" ಅಂತ ಕೂಗು ಕೇಳ್ಸುತ್ತೆ!
ಅವಳ ದನಿಗೆ "ಏನಮ್ಮ" ಅಂತ ಇದ್ದಲ್ಲಿಂದ್ಲೆ ಕೂಗ್ ಹಾಕ್ದಾಗ ತಿಳಿಯುತ್ತೆ, ಕೆಲವರಿಲ್ದೆ ಜೀವನ ಏನೂ ಅಲ್ಲಾ ಅಂತ!

----------------

ನನ್ನ ಮಾಯಾ ಲೋಕದಲ್ಲಿ,
ಅಚ್ಚಳಿಯದ ಹೆಸರೊಂದು ಉಂಟು,
ಅಂದದ ಹೆಸರೊಂದು ಉಂಟು,

ಆ ಹೆಸರಲ್ಲಿ ನನ್ನ ಕಲ್ಪನೆಗಳು ಉಂಟು,
ಕಾಲ ಜ್ಞಾನದ ತತ್ವ ಒಂದುಂಟು,
"ಇದಾವುದು ನಿನ್ನದಲ್ಲ! "
ನನ್ನದಲ್ಲದ ಮಾಯಾ ಲೋಕದಲ್ಲಿ ನನ್ನದಲ್ಲದ ಹೆಸರೊಂದು ಉಂಟು!

-------------------

ಶುಕ್ರವಾರ, ಜುಲೈ 18, 2014

ಚುಟುಕು ಕವನ ಎನ್ನಲೇ?

ನೀರಿರದ ಕಡಲೊಳಗಿಂದ,
ಹೂವಿರದ ಬನ ಬನಗಳಿಂದ,
ಹಣ್ಣಿರದ ವನ ರಾಶಿಗಳಿಂದ,
ರೆಕ್ಕೆಗಳಿರದ ಬಾನಾಡಿಗಳಿಂದ,
ನೆನಪುಗಳೇ ಇರದ ಪರ ಲೋಕದಿಂದ,
ಕನಸೆಂಬ ಭ್ರಮೆ ತಂದಿರುವೆ! ಬೇಕೇ?
______________________________

 ನನ್ನ ಮಾಯಾ ಲೋಕದಲ್ಲಿ,
ಅಚ್ಚಳಿಯದ ಹೆಸರೊಂದು ಉಂಟು,
ಅಂದದ ಹೆಸರೊಂದು ಉಂಟು,
ಆ ಹೆಸರಲ್ಲಿ ನನ್ನ ಕಲ್ಪನೆಗಳು ಉಂಟು,
ಕಾಲ ಙ್ಞಾನದ ತತ್ವ ಒಂದುಂಟು, "ಇದಾವುದು ನಿನ್ನದಲ್ಲ!" 
ನನ್ನದಲ್ಲದ ಮಾಯಾ ಲೋಕದಲ್ಲಿ
ನನ್ನದಲ್ಲದ ಹೆಸರೊಂದು ಉಂಟು!
________________________________


ಹೀಗೆ ಟ್ವಿಟ್ಟರ್ ನಲ್ಲಿ ಗೀಚಿದ ಸಾಲುಗಳು ಇವು. :)

Chutuku kavana yenna bahude?

ಹಚ್ಚಿಟ್ಟ ದೀಪಕ್ಕೆ ಗುರಿಯೇ ಇಲ್ಲ,
ನಡೆಯುವ ದಾರಿಗೆ ನೆಲೆಯೇ ಇಲ್ಲ,
ಮನುಷ್ಯ ಜನ್ಮವಿದು ಬೆಲೆಯೇ ಇಲ್ಲ.
ಅರಿವು ಕಾಣದ ಮರುಳೆ!
೧೭/೭/೧೪
______________________________

ಜಾರಿತೇನೋ ತಿಳಿಯದು
ಕಳೆಯಿತೇನೋ ಕಾಣದು
ಸುಪ್ತ ಮನಸ್ಸಿನ ಗುಪ್ತ ವಿಚಾರ ಹೇಳಲೇನೂ ತೋಚದು.
_____________________________

ಮೌನದ ಕನ್ನಡಿ ಮರೆತಿಹುದು ನಿನ್ನ,
ಪ್ರವಾಹದ ತೊರೆಯಲ್ಲಿ ಮುಳುಗಿಹುದು ಬಣ್ಣ,
ಮೌನ ಕೇಳಿದವರಿಲ್ಲ.
ಬಣ್ಣ ಕಾಣದವರಿಲ್ಲ.
 _____________________________

ಸೋಮವಾರ, ಮೇ 19, 2014

Mounada maathugaLu

ಯಾಕೋ  ಈ ನಡುವೆ ಕವಿತೆ ಗೀಚಕ್ಕೆ ಸಮಯ ಇದ್ರೂ ಆಗ್ಲಿಲ್ಲ.
ಇವತ್ತು ತುಂಬಾ ಕೆಲಸ  ಇದ್ರೂ ಮಾಡಕ್ಕೆ ಆಗ್ಲಿಲ್ಲ... ಹಾಗಾಗಿ ಬರೆದೆ ಈ ಕವಿತೆ...



ಮೌನದಲ್ಲಿ,
ಮೂಕ ವಿಸ್ಮಯದಲ್ಲಿ,
ಮುಕ್ತಾಯವ ಬರೆಯಲೊಲ್ಲೆ...

ಕವಿತೆಯ ಸಾಲಲ್ಲಿ,
ಪ್ರಾಸದ ಮಡಿಲಲ್ಲಿ,
ಮಾತನು ಮರೆಯಲೊಲ್ಲೆ...

ಹೂವಿನ ನಗುವಲ್ಲಿ,
ಗಾಳಿಯ ಅಲೆಗಳಲ್ಲಿ,
ಸಂತಾಪವ ಸೂಚಿಸಲೊಲ್ಲೆ...

ದ್ವಂದ್ವದ ಗಿರಿಯಲ್ಲಿ,
ನೆನಪಿನ ಹಾಳೆಗಳಲ್ಲಿ,
ಪೂರ್ಣ ವಿರಾಮವನಿಡಲೊಲ್ಲೆ,

ನೋವಲ್ಲಿ, ನಲಿವಲ್ಲಿ,
ಕನಸಿನ ಮರೆಯಲ್ಲಿ,
ಕ್ಷಣಗಳ ಮರೆಯಲೊಲ್ಲೆ ...

ಮೂಕವಾಗಲೊಲ್ಲೆ...
ಮೌನತಾಳಲೊಲ್ಲೆ...
ಮಾತಿಲ್ಲದೆ ಮುಕ್ತಾಯವ ಹಾಡಲೊಲ್ಲೆ...